ಮಡಿಕೇರಿ ಮೇ 10 : ನಕ್ಸಲ್ ಪೀಡಿತ ವಣಚಲು ಮತಗಟ್ಟೆಯಲ್ಲಿ ಬೆಳಗ್ಗಿನ ಅವಧಿ ಚುರುಕಿನ ಮತದಾನ ನಡೆಯಿತು. ಮಧ್ಯಾಹ್ನದ ವೇಳೆಗೆ ಶೇ.55ರಷ್ಟು ಮತದಾನ ದಾಖಲಾಯಿತು. ಈ ಮತಗಟ್ಟೆಗೆ ಶಸ್ತ್ರ ಸಜ್ಜಿತ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದಕ್ಷಿಣ ಕೊಡಗಿನ ಕೆಲ ಮತಗಟ್ಟೆಗಳು ವನ್ಯಜೀವಿಗಳ ಉಪಟಳಕ್ಕೆ ತುತ್ತಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ನಿಯೋಜನೆ ಮಾಡಲಾಗಿತ್ತು.ಭಯ ಮುಕ್ತ ಮತದಾನಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೈಜೋಡಿಸಿದ್ದರು.
ಮಡಿಕೇರಿ ಕ್ಷೇತ್ರದ ಮಾದಾಪುರ ಮತಗಟ್ಟೆಯ ಗೊಂದಲದಿಂದ ಕೆಲ ಕಾಲ ಮತದಾನಕ್ಕೆ ತೊಡಕುಂಟಾಯಿತು. ಈ ಹಂತದಲ್ಲಿ ಮತದಾನಕ್ಕೆ ಕಾಯ್ದು ಬಳಲಿದ್ದ ಮತದಾರರು ಕುಡಿಯುವ ನೀರಿಗಾಗಿ ಪರದಾಡಿ ತಾಳ್ಮೆ ಕಳೆದುಕೊಂಡರು. ಈ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅರೆಸೇನಾ ಪಡೆಯ ಸಿಬ್ಬಂದಿ ಲಾಠಿ ಬೀಸಿದ ಪರಿಣಾಮ ಮತದಾರರೊಬ್ಬರ ಕಾಲಿಗೆ ಗಾಯವಾಗಿ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು. ನಂತರ ಚುನಾವಣಾಧಿಕಾರಿಗಳು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ಜಂಬೂರು ಬಾಣೆ ಮತ್ತು ಎಫ್.ಎಂ.ಸಿ ಬಡಾವಣೆಯ (ಪ್ರಕೃತಿ ವಿಕೋಪ ಪುನರ್ವಸತಿ ಬಡಾವಣೆ) ಮತದಾರರಿಗೆ ಮತಗಟ್ಟೆ ಸಂಖ್ಯೆ 119ರಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಎರಡು ಬಡಾವಣೆಗಳ ಮತದಾರರ ಸಂಖ್ಯೆ ಹೆಚ್ಚು ಇರುವುದೇ ಈ ಸಮಸ್ಯೆಗೆ ಕಾರಣವಾಗಿದ್ದು, ಮೊದಲೇ ಈ ಕುರಿತು ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿ ಎರಡು ಪ್ರತ್ಯೇಕ ಬೂತ್ ಮಾಡಿದ್ದರೆ ಈ ಗೊಂದಲ ಆಗುತ್ತಿರಲಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದ್ದ, ನಾಗರಹೊಳೆ ಬಳಿಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆ, ಹಾಗೆಯೇ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆದಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತಹಕ್ಕು ಚಲಾಯಿಸಿ, ಸಂಭ್ರಮಿಸಿದರು.
ಮದೆನಾಡು, ಸುಂಟಿಕೊಪ್ಪ, ಸಿದ್ದಾಪುರ, ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ, ಮೂರ್ನಾಡು, ನಾಪೋಕ್ಲು, ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ, ಮಾದಾಪುರ, ಹೆಬ್ಬಾಲೆ ಮತಗಟ್ಟೆಗಳಲ್ಲಿ ಮತದಾರರು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.











