ಮಡಿಕೇರಿ ಮೇ 15 : ಕೊಡಗಿನ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತ ಶಯನ ಅವರು ಬರೆದಿರುವ ಪ್ರತಿಕೋದ್ಯಮ ಅನುಭವ ಆಧಾರಿತ ‘ಸೊಡರು’ ಗಣ್ಯರ ಸಮ್ಮುಖದಲ್ಲಿ ಅನಾವರಣಗೊಂಡಿತು.
ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ರಾಜ್ಯ ಪ್ರೆಸ್‍ಕ್ಲಬ್ ಹಾಗೂ ಮಾದ್ಯಮ ಅಕಾಡೆಮಿ ಮಾಜೀ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅವರು ಸೊಡರು ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿ, ಪತ್ರ್ರಿಕಾ ಕ್ಷೇತ್ರಕ್ಕೆ ಕಾಲಿಡುವವರಿಗೆ ಮಾರ್ಗದರ್ಶಕವಾಗಿ ‘ಸೊಡರು’ ಪುಸ್ತಕ ರುಪುಗೊಂಡಿರುವುದಾಗಿ ಮೆಚ್ಚುಗೆಯ ನುಡಿಗಳನ್ನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕಾರ್ಯವೈಖರಿಗಳ ಮೂಲಕ ಸಮಾಜದ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುವುದು ಅವಶ್ಯಕ. ‘ಬ್ರೇಕಿಂಗ್’ ನ್ಯೂಸ್‍ಗಳ ಧಾವಂತದ ಪತ್ರಿಕೋದ್ಯಮದ ನಡುವೆ ಸಾತ್ವಿಕವಾದ , ಸೃಜನಾತ್ಮಕವಾದ ಪತ್ರಿಕೋದ್ಯಮದ ಅಗತ್ಯವಿದೆಯೆಂದು ಅಭಿಪ್ರಾಯಿಸಿದರು.
ಗಡಿನಾಡು ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ. ರಮೇಶ್, ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ಇರುವವರು ಓದುವ ಹವ್ಯಾಸವನ್ನು ಮೊದಲನೆಯದಾಗಿ ರೂಢಿಸಿಕೊಳ್ಳುವುದು ಅವಶ್ಯವೆಂದು ತಿಳಿಸಿ, ಈಗಿನಷ್ಟು ಸೌಲಭ್ಯಗಳು ಇಲ್ಲದಿದ್ದ ಕಾಲಘಟ್ಟದ ಪತ್ರಿಕೋದ್ಯಮದ ವಿಚಾರಗಳನ್ನು ಇಂದಿನವರಿಗೆ ತಿಳಿಸುವ ಕೆಲಸ ಇಂತಹ ಪುಸ್ತಕಗಳಿಂದ ಮಾಡಲು ಸಾಧ್ಯವಿದೆಯೆಂದು ತಿಳಿಸಿದರು.
ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು, ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಎದುರಿಸುವ ಸಮಸ್ಯೆಗಳ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ, ಅಸತ್ಯಗಳು ವೈಭವೀಕರಣವಾಗುತ್ತಿರುವ ಧಾವಂತದ ಈ ಕಾಲ ಘಟ್ಟದಲ್ಲಿ ಸತ್ಯವನ್ನು ಜನರಿಗೆ ತಲುಪಿಸುವ ಕಾರ್ಯ ಪತ್ರಿಕಾ ಕ್ಷೇತ್ರದಿಂದ ನಡೆಯುವಂತಾಗಲೆಂದು ಹಾರೈಸಿದರು.
ಸನ್ಮಾನ- ಸಮಾರಂಭದ ಆರಂಭದಲ್ಲೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ತಗಡೂರು, ಎಂ.ಎ. ಪೊನ್ನಪ್ಪ, ಟಿ.ಪಿ. ರಮೇಶ್, ಜಿ.ರಾಜೇಂದ್ರ, ಅವರನ್ನು ಪುಸ್ತಕವನ್ನು ರಚಿಸಿದ ಬಿ.ಜಿ. ಅನಂತಶಯನ ಅವರ ಕುಟುಂಬಸ್ಥರು, ಶಕ್ತಿ ಬಳಗ ಮತ್ತು ಆತ್ಮೀಯರು ಸನ್ಮಾನಿಸಿ ಗೌರವಿಸಿದರು.
ಲೇಖಕ ಬಿ.ಜಿ. ಅನಂತ ಶಯನ ಅವರು ಮಾತನಾಡಿ, ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದ ತನ್ನ ಅನುಭವಗಳನ್ನು ಪುಸ್ತಕದಲ್ಲಿ ತಾನು ದಾಖಲಿಸಿರುವುದಾಗಿ ತಿಳಿಸಿದರು. ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ಪುಸ್ತಕ ಪರಿಚಯ ಮಾಡುತ್ತಾ, ಪತ್ರಿಕೋದ್ಯಮದ ಅನುಭವದ ಮತ್ತಷ್ಟು ಪುಸ್ತಕಗಳು ಅನಂತಶಯನ ಅವರಿಂದ ಮೂಡಿ ಬರಲಿ ಎಂದು ಹಾರೈಸಿದರು.
ಚಿ.ನಾ. ಸೋಮೇಶ್ ಅವರು ಸ್ವಾಗತಿಸಿದರು, ಪ್ರಜ್ವಲ್ ರಾಜೇಂದ್ರ, ಶ್ವೇತಾ ರವೀಂದ್ರ, ಪ್ರತಿಮಾ ರೈ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಡಾ. ಅನುಶ್ರೀ ಅನಂತಶಯನ ವಂದಿಸಿದರು.