ಸೋಮವಾರಪೇಟೆ ಮೇ 11 : ಜಾಲ್ಸೂರು ಬೆಂಗಳೂರು ಎಸ್‍ಎಚ್-85 ಮಾರ್ಗದ ಕೂತಿ ಗ್ರಾಮದಲ್ಲಿ ರಸ್ತೆ ಕಿರಿದಾಗಿದ್ದು ನಿರ್ವಹಣೆಯಿಲ್ಲದೆ ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಕಲೇಶಪುರ ತಾಲ್ಲೂಕಿನ ರಸ್ತೆಯಾಗಿದ್ದು, ಕೊಡಗು ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯದ ಹಿನ್ನಲೆ, ಎಡದಂಟೆ, ಕೂತಿ, ಇನಕನಹಳ್ಳಿ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಹೊಸಬೀಡು, ಕಲ್ಲಂದೂರು ಗ್ರಾಮಸ್ಥರು ಸಮಸ್ಯೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೂತಿ ಗ್ರಾಮದ ದೀಣೆಕೆರೆ ಜಂಕ್ಷನ್‍ನಲ್ಲಿ ಕಿರಿದಾದ ರಸ್ತೆಯ ಮೇಲೆ ಮಣ್ಣು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಅಯಾತಪ್ಪಿ ಬಿದ್ದ ಪರಿಣಾಮ ಸವಾರ ಹಾಗೂ ಹಿಂಬದಿ ಸವಾರರು ಗಾಯಗೊಂಡಿದ್ದಾರೆ.
ಪಟ್ಟಣದ ರೆಂಜರ್‍ಬ್ಲಾಕ್ ನಿವಾಸಿಗಳಾದ ಸುನಿಲ್ ಆಚಾರಿ, ಖುಷಿ ಎಂಬವರು ಸಕಲೇಶಪುರದಿಂದ ವಾಪಾಸ್ಸು ಸೋಮವಾರಪೇಟೆಗೆ ಸ್ಕೂಟಿಯಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಗ್ರಾಮಸ್ಥರು ಅಂಬುಲೆನ್ಸ್ ಮೂಲಕ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸುನಿಲ್ ಕೈಮೂಳೆ ಮುರಿದ್ದಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣವೇ ರಸ್ತೆ ಮೇಲೆ ಸಂಗ್ರಹವಾಗಿರುವ ಮಣ್ಣು ತೆರವುಗೊಳಸಬೇಕು. ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಗ್ರಾಮದ ನಿವಾಸಿ ಲಕ್ಷ್ಮೀಕಾಂತ್ ಒತ್ತಾಯಿಸಿದರು.









