ಮಡಿಕೇರಿ ಮೇ 16 : ಅಂಗಡಿ ಮಳಿಗೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ನಗರದ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದ ಸಮೀಪ ಟಿ.ವಿ.ಎಸ್. ಶೋ ರೂಂ ಮುಂಭಾಗದ ಹಾಬೀಬ್ ಉಲ್ಲಾಖಾನ್ ಎಂಬವರ ಕಟ್ಟಡದಲ್ಲಿ ಮಳಿಗೆ ಹೊಂದಿರುವ ನಂದಿ ಪೈಂಟ್ಸ್ ಮತ್ತು ಹಾರ್ಡ್‍ವೇರ್ ಮಳಿಗೆಗೂ ಆಕಸ್ಮಿಕ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ.
ದಿನೇಶ್ ಎಂಬವರಿಗೆ ಸೇರಿದ ಪೈಂಟ್ಸ್ ಮತ್ತು ಹಾರ್ಡವೇರ್ ಅಂಗಡಿಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳಿಗೆಯಲ್ಲಿದ್ದ ಪೈಂಟ್ಸ್, ನಗದು ಸೇರಿದಂತೆ ಮೂರು ಕಂಪ್ಯೂಟರ್, ಪ್ರಿಂಟಿಂಗ್ ಮಿಷನ್, ಕಲರ್ ಮಿಕ್ಸಿಂಗ್ ಮಿಷನ್ ಮತ್ತು ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿವೆ.
ಅಂಗಡಿ ಮಾಲೀಕ ದಿನೇಶ್ ಅವರು ವಿರಾಜಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ.