ಮಡಿಕೇರಿ ಮೇ 22 : ವಿಕೆ3 ಪಿಕ್ಚರ್ಸ್ ಬ್ಯಾನರ್ ನಡಿ ಈರಮಂಡ ಹರಿಣಿ ವಿಜಯ್ ಮತ್ತು ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನೇತೃತ್ವದಲ್ಲಿ ನಿರ್ಮಾಣವಾದ ಕೊಡವ ಕಾದಂಬರಿ ಆಧಾರಿತ, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಲನಚಿತ್ರ 77ನೇ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಗೋವಾದ ಯುಎಫ್‍ಎಂಸಿ ಸಹಯೋಗದಲ್ಲಿ ನಡೆದ ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್-2023 ರಲ್ಲಿ “ನಾಡ ಪೆದ ಆಶಾ” ಕೊಡವ ಚಲನಚಿತ್ರ “ಅತ್ಯುತ್ತಮ ಸಾಮಾಜಿಕ ಚಲನಚಿತ್ರ” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕನ್ನಡದ ಖ್ಯಾತ ನಟಿ ಅನುಪ್ರಭಾಕರ್ ಮುಖರ್ಜಿ ಹಾಗೂ ಗೋವಾ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಪುರಾತತ್ವಶಾಸ್ತ್ರ ಸಚಿವ ಸುಭಾಷ್ ಪೌಲ್ ದೇಸಾಯಿ ಅವರಿಂದ, “ನಾಡ ಪೆದ ಆಶಾ” ಚಿತ್ರದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭ ಗೋವಾ-ಪಣಜಿ ಮೇಯರ್ ಸುರೇಂದ್ರ ಫೆರ್ಟಾಡೊ, ಯೂನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಅಧ್ಯಕ್ಷ ಮಮ್ಮಿಗಟ್ಟಿ, ಥೈಲ್ಯಾಂಡ್ ನ ಡ್ರೀಮ್ ಲ್ಯಾಂಡ್ ಉದ್ಯಮಿ ಹಾಗೂ ಹಲವು ರಾಜ್ಯಗಳ ವಿವಿಧ ನಟ ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರುಗಳು ಹಾಜರಿದ್ದರು.
ಈಗಾಗಲೇ 123 ಯಶಸ್ವಿ ಪ್ರದರ್ಶನ ಕಂಡು ಜನಮನ ಗೆದ್ದಿರುವ ನಾಡ ಪೆದ ಆಶಾ ಕೊಡವ ಸಿನಿಮಾ ದೆಹಲಿ, ಡೆಹರಾಡೂನ್, ಚಂಡಿಘಡ್, ಕೊಲ್ಕತ್ತಾ, ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಹೈದರಬಾದ್, ಮುಂಬೈ, ಅಸ್ಸಾಂ ಗಳಲ್ಲಿ ನಡೆದ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಆಯ್ಕೆ ಗೊಂಡು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡು ಇತಿಹಾಸ ನಿರ್ಮಿಸಿದ ಸಿನಿಮಾ ಎಂಬ ಖ್ಯಾತಿಯನ್ನು ಹೊಂದಿದೆ.











