ಮಡಿಕೇರಿ ಮೇ 22 : ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಿ ಪ್ರವಾಸಿಗರ ಸುರಕ್ಷತೆ ಹಾಗೂ ಅವರ ಪ್ರವಾಸ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವಂತೆ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಪ್ರಮುಖರು ಜಿ ಚೇಂಬರ್ ಆಫ್ ಕಾಮಸ್೯, ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಸಿಸಿದ್ದಾರೆ.
ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಪ್ರಮುಖರು ಜಿಲ್ಲಾ ಚೇಂಬರ್ ಆಫ್ ಕಾಮಸ್೯, ಕೊಡಗು ಹೋಂಸ್ಟೇ ಅಸೋಸಿಯೇಷನ್ ನ ಪ್ರಮುಖರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಪೊಲೀಸ್ ವರಿಷ್ಟಾಧಿಕಾರಿ ಕೆ ರಾಮರಾಜನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮಡಿಕೇರಿ ವ್ಯಾಪ್ತಿಯ ಪ್ರವಾಸೀ ತಾಣ ಅಬ್ಬಿ ಫಾಲ್ಸ್ ನಲ್ಲಿ ಕೆಲವರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸಂಘಸಂಸ್ಥೆಗಳ ಪ್ರಮುಖರು, ಪ್ರವಾಸಿಗರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಈ ಘಟನೆಯಿಂದ ಪ್ರವಾಸಿಗರಿಗೆ ಕೊಡಗಿನಲ್ಲಿ ಸೂಕ್ತ ರಕ್ಷಣೆ ಇಲ್ಲ ಎಂಬ ಅಭಿಪ್ರಾಯ ಪ್ರವಾಸಿ ವಲಯದಲ್ಲಿ ವ್ಯಕ್ತವಾಗುತ್ತಿದ್ದು ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಕುಗ್ಗಿ ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಮನಹರಿಸಿ ಅಭ್ಬಿಫಾಲ್ಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ ಕೊಡಗಿಗೆ ಬರುವಂತ ಪ್ರವಾಸಿಗರಿಗೆ ರಕ್ಷಣೆ ನೀಡಬೇಕಾಗಿ ಮನವಿ ಮಾಡಲಾಯಿತು.
ಪ್ರವಾಸಿಗರ ಮೇಲಿನ ಹಲ್ಲೆಯ ಘಟನೆಯನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕಾಗಿ ವಿನಂತಿ ಮಾಡಿರುವ ಸಂಘವು. ಮುಂದೆ ಇಂಥ ಘಟನೆ ಮರುಕಳಿಸಬಾರದು ಎಂದೂ ಆಗ್ರಹಿಸಿದೆ. ಈಗಾಗಲೇ ನಾಲ್ಕೈದು ವರ್ಷದಿಂದ ಕೊಡಗಿನ ವ್ಯಾಪಾರವಹಿವಾಟಿಗಳು ಭೂ ಕುಸಿತ ಹಾಗೂ ಕೋವಿಡ್ ಲಾಕ್ ಡೌನ್ ನಂತರದ ದಿನಗಳಲ್ಲಿ ಆಥಿ೯ಕವಾಗಿ ಕೊಡಗಿನ ಎಲ್ಲರೂ ಸಂಕಷ್ಟದಲ್ಲಿದ್ದಾರೆ.ಹೀಗಿರುವಾಗ ಇಂಥ ಘಟನೆಗಳಿಂದಾಗಿ ಪ್ರವಾಸೋದ್ಯಮ ಮತ್ತಷ್ಟು ಸಮಸ್ಯೆಗೆ ಸಿಲುಕುವ ಅಪಾಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ಪ್ರಮುಖರು ಮನವಿ ಮಾಡಿದರು. ಜಿಲ್ಲಾಧಿಕಾರಿ ಡಾ.ಬಿ.ಸಿಸತೀಶ್ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಪ್ರತಿಕ್ರಿಯಿಸಿ, ಪ್ರವಾಸಿಗರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಲುವ ಭರವಸೆ ನೀಡಿದರು.
ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಕಾಯ೯ದಶಿ೯ ನಾಜಿರ್ ಅಹಮ್ಮದ್ , ಖಜಾಂಜಿ ಕೆ.ಕೆ. ಭಾಸ್ಕರ್, ಚೇಂಬರ್ ಆಫ್ ಕಾಮಸ್೯ ಪ್ರಧಾನ ಕಾಯ೯ದಶಿ೯ ಅಂಬೆಕಲ್ ನವೀನ್, ಸಂಘಟನಾ ಕಾಯ೯ದಶಿ೯ ಮೋಂತಿ ಗಣೇಶ್ , ಹೋಂಸ್ಟೇ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬಿ.ಜಿ.ಅನಂತಶಯನ, ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.








