ಮಡಿಕೇರಿ, ಮೇ 23: ರಾಜ್ಯದಾದ್ಯಂತ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೀರಲೋಕ ಪ್ರಕಾಶನ ಮುಂದಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಸಂಚಾಲಕರುಗಳನ್ನು ನೇಮಿಸಲಾಗಿದೆ. ಕೊಡಗಿನಿಂದ ಸಂಚಾಲಕರನ್ನಾಗಿ ಬಿ.ಜಿ. ಅನಂತ ಶಯನ ಅವರನ್ನು ನೇಮಿಸಲಾಗಿದೆ.
ನಿನ್ನೆ ದಿನ ಬೆಂಗಳೂರಿನಲ್ಲಿ ನಡೆದ ಸಂಚಾಲಕರುಗಳ ಪ್ರಥಮ ಸಭೆಯಲ್ಲಿ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ವೀರಕಪುತ್ರ ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿದರು. ಪ್ರಕಾಶನವು ತರಬೇತಿ ಕಮ್ಮಟದ ಮೂಲಕ ಕಥಾಸಂಕಲನ ಹೊರತರಲು ಉದ್ದೇಶಿಸಿದ್ದು, 2024 ರಲ್ಲಿ ನಡೆಸಲು ಉದ್ದೇಶಿಸಿರುವ ‘ಲಿಟ್ ಫೆಸ್ಟ್’ನಲ್ಲಿ ವಿಶೇಷವಾಗಿ ಆಯ್ದ ಕಥೆಗಾರರನ್ನು ಗುರುತಿಸಲಾಗುವುದು ಎಂದಿದ್ದಾರೆ.
ಸಮಾಲೋಚನಾ ಸಭೆಯಲ್ಲಿ ಸಾಹಿತಿ ಕಾ.ತಾ. ಚಿಕ್ಕಣ್ಣ ಹಾಗೂ ಲಕ್ಷ್ಮಣ ಕೊಡಸೆ ಹಾಜರಿದ್ದು ಇದೊಂದು ‘ದೇಸಿ ಜಗಲಿ’ ಕಥಾ ಕಮ್ಮಟ ಯೋಜನೆ ಆಗಿದ್ದು, ಗ್ರಾಮೀಣ ವಿಭಾಗಗಳಲ್ಲಿ ಅವಕಾಶ ವಂಚಿತರಾಗಿ ಉಳಿವ, ನಲವತ್ತು ವರುಷದೊಳಗಿನ ಯುವ ಪ್ರತಿಭೆಗಳಿಗೆ ಉಪಯುಕ್ತ ಕಾರ್ಯಕ್ರಮವಾಗಲಿದೆ ಎಂದರು.
ಈ ಸಂದರ್ಭ ಮಾತನಾಡಿದ ಶ್ರೀನಿವಾಸ್ ಅವರು, ಇಂದು ಫ್ಲಿಪ್‍ಕಾರ್ಟ್ ಮೂಲಕ ಸೆಗಣಿ ತರಿಸುವಷ್ಟೂ ಸಮಾಜ ಮುಂದುವರಿದಿದ್ದು, ಕನ್ನಡ ಪುಸ್ತಕಗಳು ಮಾತ್ರ ಲಭ್ಯವಿಲ್ಲ ಎಂದು ವಿಷಾಧಿಸಿದರು. ಈ ‘ಟ್ರೆಂಡ್’ ಮುರಿದು, ಕನ್ನಡ ಪುಸ್ತಕ ಲೋಕ ಮಾರುಕಟ್ಟೆಗೂ ಆಧುನಿಕ ರೂಪು ನೀಡುವತ್ತ ತಮ್ಮ ಪ್ರಕಾಶನ ಹೆಜ್ಜೆ ಹಾಕಲಿದೆ ಎಂದರು. ವೀರಲೋಕ ಬುಕ್ಸ್ ಕಾಂ ಪುಟದ ಮೂಲಕ ಹತ್ತು ಸಾವಿರ ಕನ್ನಡ ಪುಸ್ತಕಗಳನ್ನು ಲಭ್ಯವಾಗಿಸಲು ಯತ್ನಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಅವಕಾಶ :: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಎರಡು ದಿನದ ಉಚಿತ ಕಥಾಕಮ್ಮಟ ಏರ್ಪಡಿಸಲಾಗುವುದು ಎಂದು ಬಿ.ಜಿ. ಅನಂತ ಶಯನ ತಿಳಿಸಿದ್ದಾರೆ. ನಲವತ್ತು ವರುಷದೊಳಗಿನ ಉದಯೋನ್ಮುಖ ಕಥಾ ಬರಹಗಾರರು ತರಬೇತಿಗೆ ನೋಂದಣಿ ಮಾಡಿಕೊಳ್ಳಲು ಕೋರಿದ್ದಾರೆ. ಮೊದಲ ಮೂವತ್ತು ನೋಂದಣಿಗೆ ಮಾತ್ರ ಅವಕಾಶವಿದ್ದು, ಆಸಕ್ತರು 9844576429 ಗೆ ವಿವರ ಸಹಿತ ಬರೆಯಬಹುದು.








