ಮಡಿಕೇರಿ ಮೇ 23 : ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಎರಡು ದಿನ ಶ್ರದ್ಧಾಭಕ್ತಿಯಿಂದ ನಡೆಯಿತು.
ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ ಪೊಲವಂದೆರೆ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಿತು.
ನಂತರ ಊರಿನ ನಿಗದಿತ ಅಂಬಲಗಳಲ್ಲಿ ವಿವಿಧ ಕಟ್ಟುಪಾಡಿನೊಂದಿಗೆ ಸಾಂಪ್ರದಾಯಿಕ ಆಚರಣೆಗಳು ನಡೆದು ಅಪರಾಹ್ನ ಊರಿನ ಪ್ರಮುಖ ದೇವಾಲಯಗಳಲ್ಲೊಂದಾದ “ಪೊಲವಪ್ಪಂಡ ಕೋಟ”ದಲ್ಲಿ ಜಿಲ್ಲೆಯ ಮೂಲನಿವಾಸಿಗಳಲ್ಲೊಬ್ಬರಾದ ಪಣಿಕ ಜನಾಂಗದ ವ್ಯಕ್ತಿಯೊಬ್ಬರಿಗೆ ಪೊಲಂದೆರೆ ಆವೇಶ ಬರುವ ಮೂಲಕ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಮರುದಿನ ಚಮ್ಮಟೀರ ಬಲ್ಯಮನೆಯಲ್ಲಿ ಹಬ್ಬದ ಸಂಭ್ರಮದ ನಂತರ ಕೃತಕವಾಗಿ ಶೃಂಗರಿಸಲಾದ ಕುದುರೆ ಹಾಗೂ ಮೊಗ(ಪೂಮೊಗ) ಹೊರಡುವುದು , ಅಪರಾಹ್ನ 3-30 ಗಂಟೆಗೆ ಮೂಕಳೇರ ಬಲ್ಯಮನೆಯಿಂದ ಕುದುರೆ ಹಾಗೂ ಮೊಗ ಹೊತ್ತವರು ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ಅಂಬಲದಲ್ಲಿ ಸೇರಿ ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಿದರು.
ನಂತರ ಊರಿನವರಿಂದ ಪರಸ್ಪರ ಕೆಸರು ಎರಚಾಟದ ಸಂಭ್ರಮ ನಡೆದು ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.









