ಮಡಿಕೇರಿ ಮೇ 23 : ಮಡಿಕೇರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಜೆಡಿಎಸ್‍ನ ನಾಪಂಡ ಮುತ್ತಪ್ಪ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಸತ್ಯಕ್ಕೆ ದೂರವೆಂದು ಸಾಬೀತು ಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಆಣೆ ಪ್ರಮಾಣ ಮಾಡಿದರು.
ಜೆಡಿಎಸ್‍ನ ಪರಾಜಿತ ಅಭ್ಯರ್ಥಿ ನಾಪಂಡ ಮುತ್ತಪ್ಪ ವಿಧಾನಸಭಾ ಚುನಾವಣೆಯ ಮತದಾನದ ಹಿಂದಿನ ದಿನ ಯಾವುದೇ ಪ್ರಚಾರ ನಡೆಸದೆ ತಟಸ್ಥ ನಿಲುವು ಹೊಂದಿದ್ದರು. ಈ ಸಂದರ್ಭ ಅವರ ವಿರುದ್ಧ ಹಣ ಪಡೆದ ಆರೋಪ ಕೇಳಿ ಬಂದಿತ್ತಲ್ಲದೇ, ಮತ ಎಣಿಕೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರ ಗೆಲುವಿಗೆ ನಾಪಂಡ ಮುತ್ತಪ್ಪ ಕಾರಣರಾಗಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗಿತ್ತು.
ಎರಡು ರಾಷ್ಟ್ರೀಯ ಪಕ್ಷಗಳಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಾವು ಹಣ ಪಡೆದಿರುವುದು ನಿಜವೇ ಆಗಿದ್ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಇತರ ಪಕ್ಷಗಳಿಗೆ ಸವಾಲೆಸಗಿದ್ದರು. ಅದರಂತೆ ನಾಪಂಡ ಮುತ್ತಪ್ಪ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಕ್ಕೆ ಆಗಮಿಸಿ ಆಣೆ ಪ್ರಮಾಣ ಮಾಡಿದರು.
ಈ ಸಂದರ್ಭ ಪ್ರಮುಖರಾದ ಅಜ್ಜಳ್ಳಿ ರವಿ, ಮಂಜು, ಮಹದೇವ್, ಹರೀಶ್, ತ್ರಿನೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.









