ಮಡಿಕೇರಿ ಮೇ 23 : ಅತ್ಯಪರೂಪದ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣಿನ ದ್ವಿತೀಯ ವರ್ಷದ ‘ಮಾವು ಮತ್ತು ಹಲಸಿನ ಮೇಳ’ ಜಿಲ್ಲಾ ಕೇಂದ್ರ ಮಡಿಕೇರಿಯ ಹಾಪ್ ಕಾಮ್ಸ್ ಆವರಣದಲ್ಲಿ ಮೇ 26 ಹಾಗೂ 27 ರಂದು ಆಯೋಜಿತವಾಗಿದೆ.
ಹಾಪ್ ಕಾಮ್ಸ್ ಮಳಿಗೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಬೆಳೆಗಾರರಿಗೆ ತಾವು ಬೆಳೆದ ಹಣ್ಣುಗಳ ಮಾರಾಟಕ್ಕೆ ಅನುವು ಮಾಡಿಕೊಡುವ ಮತ್ತು ವಿವಿಧ ತಳಿಯ, ವಿಭಿನ್ನ ರುಚಿಯ ಮಾವು ಹಲಸನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ ಮತ್ತು ಹಾಪ್ ಕಾಮ್ಸ್ ವತಿಯಿಂದ ಆಯೋಜಿತ ಮೇಳವನ್ನು ಆರಂಭಿಕ ದಿನದಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಶಾಸಕರು, ಚುನಾಯಿತ ಜನಪ್ರತಿನಿದಿಗಳು ಉದ್ಘಾಟಿಸಲಿದ್ದಾರೆ ಎಂದರು.
ಕಳೆದ ಸಾಲಿನಲ್ಲಿ ಆಯೋಜಿತ ಮಾವು ಮೇಳಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ಮಾವಿನೊಂದಿಗೆ ಹಲಸಿನ ಹಣ್ಣನ್ನು ಒಳಗೊಂಡಂತೆ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಮೇಳದಲ್ಲಿ ‘ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ ಹಣ್ಣು’ಗಳಿಗೆ ಪ್ರಾಶಸ್ತ್ಯವನ್ನು ನೀಡಲಾಗಿದೆ. ಇದು ಆರೋಗ್ಯದ ದೃಷ್ಟಿಯಿಂದಲು ಉತ್ತಮವೆಂದು ಅನಿಸಿಕೆ ವ್ಯಕ್ತಪಡಿಸಿದರು.
::: ಉತ್ಪಾದಕರಿಗೆ-ಗ್ರಾಹಕರಿಗೆ ಸಂಪರ್ಕ :::
ಬೆಳೆಗಾರರು ವಿವಿಧ ಹಣ್ಣು ಹಂಪಲನ್ನು ಬೆಳೆಯುತ್ತಾರೆ. ಈ ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದರೊಂದಿಗೆ ಇವರ ನಡುವೆ ಸಂಪರ್ಕವನ್ನು ಏರ್ಪಡಿಸುವ ಉದ್ದೇಶವು ಮೇಳದ್ದಾಗಿದೆ. ಈ ಬಾರಿ 20 ರಿಂದ 25 ಮಳಿಗೆಗಳಲ್ಲಿ 15 ರಿಂದ 20 ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮೈಸೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕ ಬಳ್ಳಾಪುರ, ದೊಡ್ಡ ಬಳ್ಳಾಪುರದ ಮಾವಿನ ಕೃಷಿಕರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆಂದು ವಿವರಗಳನ್ನಿತ್ತರು.
::: ಗಮನ ಸೆಳೆಯಲಿರುವ ಹಲಸು :::
ಈ ಬಾರಿ ಪುತ್ತೂರು ಬಳಿಯ ‘ನವನೀತ ನರ್ಸರಿ’ಯವರು ಹಲಸಿನ ಹಣ್ಣುಗಳ ಪ್ರದರ್ಶನದೊಂದಿಗೆ, ಅವುಗಳ ಗಿಡಗಳನ್ನು ಮಾರಾಟಕ್ಕೆ ಇಡಲಿದ್ದಾರೆ. ಇದು ಜಿಲ್ಲೆಯ ಬೆಳೆಗಾರರನ್ನು ಆಕರ್ಷಿಸಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಆನ್ ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ್ಣಿನ ಬೇಡಿಕೆ ಇಡುವವರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುವ ಚಿಂತನೆಗಳು ಇರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
::: ಸ್ಥಳೀಯ ಬೆಳೆಗಾರರಿಗೆ ಅವಕಾಶ :::
ಜಿಲ್ಲೆಯ ಬೆಳೆಗಾರರು ತಾವು ಬೆಳೆದ ಬಟರ್ ಫ್ರೂಟ್, ಲೀಚ್, ಸಪೋಟ ಸೇರಿದಂತೆ ಯಾವುದೇ ಹಣ್ಣನ್ನು ಮೇಳದಲ್ಲಿರಿಸಿ ಮಾರಾಟ ಮಾಡಲು ಅವಕಾಶವನ್ನು ನೀಡಲಾಗುತ್ತದೆಂದು ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ತಿಳಿಸಿದರು.
::: 20 ಸಾವಿರ ಕೆ.ಜಿ ಮಾವು ಮಾರಾಟ :::
ಕಳೆದ ಸಾಲಿನಲ್ಲಿ ಆಯೋಜಿತ ಮಾವು ಮೇಳದಲ್ಲಿ ಹಾಪ್ ಕಾಮ್ಸ್ ಸೇರಿದಂತೆ 15 ಮಳಿಗೆಗಳನ್ನು ತೆರೆಯಲಾಗಿತ್ತು. ಹಾಪ್ ಕಾಮ್ಸ್ ತನ್ನ ಮಳಿಗೆಯಲ್ಲಿ 2500 ಕೆ.ಜಿ. ಮಾವಿನ ಹಣ್ಣಿನ ವ್ಯಾಪಾರ ಮಾಡಿದ್ದು, ಒಟ್ಟಾಗಿ 20 ಸಾವಿರ ಕೆ.ಜಿಗೂ ಅಧಿಕ ಮಾವಿನ ಹಣ್ಣಿನ ಮಾರಾಟ ನಡೆದಿತ್ತು, ಈ ಬಾರಿ ಹೆಚ್ಚಿನ ವ್ಯಾಪಾರ ವಹಿವಾಟಿನ ನಿರೀಕ್ಷೆ ಇರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖಾ ಉಪ ನಿರ್ದೇಶಕ ಹೆಚ್.ಆರ್.ನಾಯಕ್ ಉಪಸ್ಥಿತರಿದ್ದರು.









