ಮಡಿಕೇರಿ ಮೇ 23 : ದೇವಸ್ತೂರು ಗ್ರಾಮದಲ್ಲಿ ಎಂಆರ್‍ಎಫ್ ರ‍್ಯಾಲಿ ಆಫ್ ಕೂರ್ಗ್ ದ್ವಿಚಕ್ರ ವಾಹನದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಏಸ್ ಇವೆಂಟ್ಸ್ ನೇತೃತ್ವದಲ್ಲಿ ನಡೆಯಿತು.
10 ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಚಂಡಿಘಡ್, ಡಾರ್ಜಲಿಂಗ್, ಕುಲುಮಲಾನಿ, ಪುಣೆ, ಕೊಲ್ಕತ್ತ, ಗುವಾಹಟಿ ಇನ್ನಿತರ ಕಡೆಗಳಿಂದ 125 ರ‍್ಯಾಲಿ ಪಟುಗಳು ಭಾಗವಹಿಸಿದ್ದರು.
ಟಿವಿಎಸ್ ರೇಸಿಂಗ್ ತಂಡದ ರಾಜೇಂದ್ರ ಸ್ಯಾಮುಯೆಲ್, ತನ್ವೀರ್ ಅಹಮ್ಮದ್, ಅಂತರಾಷ್ಟ್ರೀಯ ಚಾಂಪಿಯನ್, ಮಹಿಳಾ ರ‍್ಯಾಲಿ ಪಟು ಹಾಗೂ ಬಿಗ್‍ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಐಶ್ವರ್ಯ ಪಿಸೆ, ಟೀಂ ಹೀರೋ ರೇಸಿಂಗ್ ತಂಡದ ಯುವ, ತನಿಕ, ರಾಷ್ಟ್ರೀಯ ಚಾಂಪಿಯನ್ ಗಳಾದ ನಟರಾಜ್, ಜತೀನ್ ಜೈನ್, ಶರತ್ ಮೋಹನ್, ಸಿನಾಸ್, ಸೌರಭ್ ಹಾಂಡ ಸೇರಿದಂತೆ ರ‍್ಯಾಲಿ ಕ್ಷೇತ್ರದ ದಿಗ್ಗಜರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.
ಓಪನ್ ಕ್ಲಸ್‍ನಲ್ಲಿ 8 ಮಂದಿ ಮಹಿಳಾ ರ‍್ಯಾಲಿ ಪಟುಗಳು ಪಾಲ್ಗೊಂಡು ಗಮನಸೆಳೆದರು.
ದೇವಸ್ತೂರು ವ್ಯಾಪ್ತಿಯಲ್ಲಿ ಕೃತಕವಾಗಿ ಮಾಡಿದ ‘ಡರ್ಟ್ ಟ್ರ್ಯಾಕ್’ನಲ್ಲಿ ಹಲವು ಸುತ್ತುಗಳನ್ನು ಸುತ್ತಿ 80 ಕಿ.ಮೀ ಅನ್ನು ರೇಸರ್‌ಗಳು ಕ್ರಮಿಸಿದರು.
ಆಧುನಿಕ ಉಪಕರಣದ ಮೂಲಕ ರೇಸರ್‌ಗಳ ಸಮಯವನ್ನು ದಾಖಲಿಸಿಕೊಳ್ಳಲಾಗಿತ್ತು. ಅಲ್ಲಲ್ಲಿ ಸ್ಟಾಪ್ ಪಾಯಿಂಟ್‍ಗಳನ್ನು ಮಾಡಲಾಗಿತ್ತು. ಮುಂಜಾಗ್ರತ ಕ್ರಮವಾಗಿ 5 ಆಂಬುಲೆನ್ಸ್ ಹಾಗೂ ವೈದ್ಯರ ತಂಡವನ್ನು ನಿಯೋಜಿಸಲಾಗಿತ್ತು. ಗ್ರಾಮಸ್ಥರು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸಿ ರೇಸ್ ಕಾಣ್ತುಂಬಿಕೊಂಡರು.
1 ಗಂಟೆ 5 ನಿಮಿಷ ಗುರಿ ಸಾಧನೆ : ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿದ್ದ ರ‍್ಯಾಲಿ ಪಟುಗಳ ಪೈಕಿ ಅತೀ ವೇಗವಾಗಿ (1 ಗಂಟೆ 5 ನಿಮಿಷ 3 ಸೆಕೆಂಡ್) ನಿಗದಿತ ಗುರಿ ಮುಟ್ಟಿದ ಟಿವಿಎಸ್ ರೇಸಿಂಗ್ ತಂಡದ ಆರ್.ಇ.ರಾಜೇಂದ್ರ ಗಮನಾರ್ಗ ಸಾಧನೆ ಮಾಡಿದರು.
ಲೇಡಿಸ್ ಕ್ಲಸ್‍ನಲ್ಲಿ ಹೀರೋ ಮೋಟೋ ಸ್ಪೋರ್ಟ್ಸ್‌ನ ತನಿಕ ಶಾನ್‍ಬಾಗ್ ಪ್ರಾಬಲ್ಯ ಸಾಧಿಸಿ ಹೆಸರಾಂತ ರ‍್ಯಾಲಿ ಪಟು ಐಶ್ವರ್ಯಾ ಪಿಸೆ ಅವರನ್ನು ಹಿಂದಿಕ್ಕಿದರು. ಆರು ಬಾರಿಯ ರಾಷ್ಟ್ರೀಯ ಚಾಂಪಿಯನ್ ಐಶ್ವರ್ಯ ಪೆಸೆ ಪುರುಷ ಬೈಕರ್‌ಗಳೊಂದಿಗೆ ಸಮಾನವಾಗಿ ಸ್ಪಧಿಸುವ ಮೂಲಕ ಗಮನ ಸೆಳೆದರು.
ಕ್ಲಾಸ್ 3 ಸೂಪರ್ ಸ್ಪೋಟ್ಸ್ 165 ಸಿಸಿ ಗ್ರೂಪ್ ಬಿ ವಿಭಾಗದಲ್ಲಿ ಕೊಡಗು ಜಿಲ್ಲೆಯ ಸ್ಟೀಫನ್ ರಾಯ್ ಪ್ರಥಮ ಸ್ಥಾನ ಪಡೆದು ಮಿಂಚಿದರು.