ಮಡಿಕೇರಿ ಮೇ 23 : ಮುಂದಿನ ಜನಾಂಗಕ್ಕೆ ಒಳ್ಳೆಯ ವಾತಾವರಣ, ಸಂಸ್ಕಾರ ಜೀವನವನ್ನು ನೀಡುವ ದೂರದೃಷ್ಟಿ ಮತ್ತು ಆಶಯದೊಂದಿಗೆ ಜೂ.11 ರಂದು ಸಿದ್ದಾಪುರದಲ್ಲಿ ದಶಲಕ್ಷ್ಮಿ ಹೋಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕಿ ನಡಿಕೇರಿಯಂಡ ಸ್ವಾತಿ ಮಂದಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಪರಿಸರ ಮತ್ತು ಜನಜೀವನದ ಸರ್ವೋತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಣ್ಣೂರಿನ ಋಷಿದೇವ್ ಪ್ರತಿಷ್ಠಾನದ ಮುಖ್ಯಸ್ಥ ಸದ್ಗುರು ನರೇಂದ್ರನ್ ಜೀ ಅವರ ಉಪಸ್ಥಿತಿಯಲ್ಲಿ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಪೂರ್ವಾಹ್ನ 10 ರಿಂದ ಸಂಜೆ 4 ರವರೆಗೆ ಹೋಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪರಿಸರ ಕಲುಷಿತವಾಗಿದೆ. ಮನುಷ್ಯ ಸಂಬಂಧಗಳು ಹಾಳಾಗಿದೆ. ಪ್ರತಿಯೊಬ್ಬರಲ್ಲೂ ಒಂದು ರೀತಿಯ ಚಿಂತನೆಗಳು ತುಂಬುತ್ತಿದೆ. ಇದರ ಫಲವಾಗಿ ದೈಹಿಕ ಮತ್ತು ಮಾನಸಿಕ ರೋಗಗಳು ಹೆಚ್ಚಾಗುತ್ತಿದೆ. ಇವಲ್ಲವನ್ನು ನಿವಾರಣೆ ಮಾಡುವ ಸಲುವಾಗಿ ಶ್ರೀ ಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ, ಧನಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ಆರೋಗ್ಯ ಲಕ್ಷ್ಮಿ, ವಿದ್ಯಾಲಕ್ಷ್ಮಿ, ಸಿದ್ಧಿ ಲಕ್ಷ್ಮಿ, ಮೋಕ್ಷಲಕ್ಷ್ಮಿ, ದೈರ್ಯ ಲಕ್ಷ್ಮಿ, ನಾಗಲಕ್ಷ್ಮಿ ಒಳಗೊಂಡ ದಶಲಕ್ಷ್ಮಿ ಹೋಮ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ಲಕ್ಷ್ಮಿ ಪೂಜೆಗೆ ರೂ.1,200, ಕಳಶ ಸಮರ್ಪಣೆಗೆ ರೂ.1,800, ಎಣ್ಣೆ ಸಮರ್ಪಣೆಗೆ ರೂ.200, ವನ ಮೂಲಿಕೆಗಳಿಗೆ ರೂ. 9,000, ಒಂದು ಟಿನ್ ಎಣ್ಣೆ ಸಮರ್ಪಣೆಗೆ ರೂ.3,500, ಹತ್ತು ಜನರಿಗೆ ಅನ್ನ ಪ್ರಸಾದ ನೀಡಲು ರೂ.1,000 ಸೇವಾ ಶುಲ್ಕಗಳನ್ನು ನಿಗದಿಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಇದೇ ಸಂದರ್ಭದಲ್ಲಿ ಯಜ್ಞ ಆಚಾರ್ಯರುಗಳಿಗೆ ದಕ್ಷಿಣೆ, ಅನ್ನಸಂತರ್ಪಣೆ, ವಸ್ತ್ರದಾನ, ಗಿಡಮೂಲಿಕೆಗಳು ಮತ್ತು ಹೋಮಕ್ಕೆ ಬೇಕಾಗಿರುವ ಅಗತ್ಯ ಮರದ ಕಟ್ಟಿಗೆಗಳು, ಎಣ್ಣೆ, ಶಾಮಿಯಾನ, ಧ್ವನಿ ಮತ್ತು ಬೆಳಕು, ಹೋಮಕುಂಡವನ್ನು ಪ್ರಾಯೋಜಿಸಲು ಕೂಡ ಅವಕಾಶವಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ 9886278790 ಸಂಖ್ಯೆಯನ್ನು ಸಂರ್ಪಕಿಸಬಹುದಾಗಿದೆ ಎಂದು ಸ್ವಾತಿ ಮಂದಣ್ಣ ತಿಳಿಸಿದರು.