ಮಡಿಕೇರಿ ಮೇ 23 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಮೇ 27 ರಂದು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಕೊಡಗು ಪ್ರೆಸ್ ಕ್ಲಬ್ ಆರೋಗ್ಯ ಸಮಿತಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಹಿಯರಿಂಗ್ ಸ್ಪೀಚ್ ಇಂಪ್ಲಾಂಟ್ ಕ್ಲಿನಿಕ್, ಶ್ರೀದೇವಿ ಮೆಡಿಕಲ್ ಸೆಂಟರ್ ಹಾಗೂ ಮೂರ್ನಾಡು ಆಸ್ಪತ್ರೆಯ ಸಹಯೋಗದೊಂದಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮೂರ್ನಾಡಿನ ಶ್ರೀ ದೇವಿ ಮೆಡಿಕಲ್ ಸೆಂಟರ್ ಹಾಗೂ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಹಾಗೂ ಹೃದಯ ಸಂಬಂದಿ ಖಾಯಿಲೆ, ರಕ್ತದೊತ್ತಡ, ಮದುಮೇಹ, ಮೂಳೆ ಸಂಬಂಧಿಸಿದ ಎಲ್ಲಾ ತರಹದ ಚಿಕಿತ್ಸೆ, ಕಿವಿ, ಮೂಗು, ಗಂಟಲು ಹಾಗೂ ಚರ್ಮ ರೋಗಗಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಆಯುರ್ವೇದ ಹಾಗೂ ಅಲೋಪತಿ ಚಿಕಿತ್ಸಾ ವಿಧಾನಗಳ ಮೂಲಕ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಸಂಧ್ಯಾ ಬೋಪಣ್ಣ 8197529036 ಅವರನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿಯ ಆರೋಗ್ಯ ಸಮಿತಿ ಸಂಚಾಲಕ ಎ.ಅಬ್ದುಲ್ಲಾ, ನಿರ್ದೇಶಕ ಜೇರುಸ್ ಥಾಮಸ್ ಅಲೆಗ್ಸಾಂಡರ್, ವೈದ್ಯೆ ಡಾ.ಅನುಷಾ, ಶ್ರೀದೇವಿ ಮೆಡಿಕಲ್ ಸೆಂಟರ್ ಹಾಗೂ ಆಸ್ಪತ್ರೆ ಮಾಲೀಕರಾದ ದೇಯಿರ ಬೋಪಣ್ಣ, ಸಂಧ್ಯಾ ಬೋಪಣ್ಣ ಉಪಸ್ಥಿತರಿದ್ದರು.