ಮಡಿಕೇರಿ ಮೇ 23 : ಸಹಾರ ಯೂಥ್ ಕ್ಲಬ್ ಆಶ್ರಯದಲ್ಲಿ ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ 4ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾವಳಿಗೆ ಸಾಗರ್ ಯೂಥ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಎಚ್.ಎ ಮುಸ್ತಫ ಚಾಲನೆ ನೀಡಿದರು.
ಈ ಸಂದರ್ಭ ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಸಮೀರ್ ಮಾತನಾಡಿ, ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಗ್ರಾಮದಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕ್ರೀಡಾಪಟುಗಳು ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಕ್ರೀಡಾ ಮನೋಭಾವ ಮೈಗೂಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.
ಚೆನ್ನಯ್ಯನ ಕೋಟೆ ಗ್ರಾ.ಪಂ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರ ಮೂಲಕ ಕ್ರೀಡಾಭಿಮಾನದಿಂದ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿರುವುದು ಶ್ಲಾಘನೆ ಎಂದರು.
ಕೊಡಗು ಚಾಂಪಿಯನ್ ಲೀಗ್ (ಕೆಸಿಎಲ್) ಸ್ಥಾಪಕ ಎ.ಎಸ್.ಮುಸ್ತಫ ಮಾತನಾಡಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರ ಮೂಲಕ ಕ್ರೀಡಾ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದ್ದು, ಗ್ರಾಮೀಣ ಭಾಗದ ಕ್ರೀಡಾಪಟುಗಳು ಎಲೆಮರೆ ಕಾಯಿಯಂತೆ ಪ್ರತಿಭೆಯಿದ್ದರೂ ಅವಕಾಶ ಸಿಗದಂತಾಗಿದೆ. ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಕ್ರೀಡಾಪಟುಗಳಿದ್ದರು ಕ್ರೀಡಾ ಇಲಾಖೆಗಳ ಸಹಕಾರ ಇಲ್ಲದಂತಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಂದಿಗೂ ಸಾರ್ವಜನಿಕ ಆಟದ ಮೈದಾನವಿಲ್ಲದೆ ರಸ್ತೆ ಬದಿಗಳಲ್ಲಿ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕ್ರೀಡಾಕೂಟ ಆಯೋಜನೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಪ್ರತಿ ಗ್ರಾ.ಪಂ ಮಟ್ಟದಲ್ಲಿ ಸಾರ್ವಜನಿಕ ಆಟದ ಮೈದಾನ ವ್ಯವಸ್ಥೆ ಮಾಡಿದ್ದಲ್ಲಿ ಕ್ರೀಡೆಯ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದ್ದು, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದ ಅವರು, ಯುವಕರು ಮಾದಕ ವ್ಯಸನಿಗಳಿಂದ ದೂರವಿದ್ದು, ಶಿಕ್ಷಣ ಹಾಗೂ ಕ್ರೀಡೆಯ ಮೂಲಕ ಸಾಧಿಸುವ ಛಲದೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡು ಕ್ರೀಡಾಭಿಮಾನದ ಮೂಲಕ ಮುನ್ನಡೆಯಬೇಕೆಂದು ಕರೆ ನೀಡಿದರು.
ಮುಸ್ಲಿಂ ಕಪ್ ಕಾರ್ಯಕ್ರಮದ ಅಧ್ಯಕ್ಷ ಉರೈಸ್ ಮಾತನಾಡಿ ಕಾಲ್ಚೆಂಡು ಪಂದ್ಯಾವಳಿಯು ಆರು ದಿನಗಳ ಕಾಲ ನಡೆಯಲಿದ್ದು, ಒಟ್ಟು 72 ತಂಡಗಳು ಭಾಗವಹಿಸಲಿದೆ. ಪ್ರತಿದಿನ 15 ಪಂದ್ಯ ನಡೆಯಲಿದ್ದು, ಮೇ 28 ರಂದು ಫೈನಲ್ ಪಂದ್ಯ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮಗಳು ನಡೆಯಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ದಾನಿಗಳು, ಸಮಾಜ ಸೇವಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೊಡಗು ಮುಸ್ಲಿಂ ಕ್ಲಬ್ ಅಧ್ಯಕ್ಷ ಸಲೀಂ, ಸ್ಥಾಪಕ ಅಧ್ಯಕ್ಷ ಆಸಿಫ್, ಸಹಾರ ಯೂಥ್ ಕ್ಲಬ್ ಅಧ್ಯಕ್ಷ ನೂಮಾನ್, ಮುಸ್ಲಿಂ ಕಫ್ ನ ಉಪಾಧ್ಯಕ್ಷ ಶಬ್ಬಿರ್, ಗೌರವ ಅಧ್ಯಕ್ಷ ಆಶ್ರಪ್, ಸರ್ವಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಕಿಶೋರ್ ಕುಮಾರ್, ಸಾಗರ್ ಕ್ಲಬ್ ನ ರದೀಶ್, ರವೀಂದ್ರ, ಪ್ರಮುಖರಾದ ಅನೀಲ್, ಇಬ್ರಾಹಿಂ, ನಿಶಾದ್, ಆಸೀಫ್ ಮುಜೀಬ್, ರಕ್ಷಿತ್ ಮುಂತಾದವರು ಹಾಜರಿದ್ದರು.