ಮಡಿಕೇರಿ ಮೇ 24 : ಕೊಡಗಿನ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪಾತ್ರ ಮಹತ್ತರವಾದುದೆಂದು ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ದಲಿತ ವಿರೋಧಿ ಧೋರಣೆಗಳ ಹಿನ್ನೆಲೆಯಲ್ಲಿ ರಾಜಕೀಯ ರಹಿತವಾದ ದಸಂಸ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಿ, ತಮ್ಮ ಗ್ರಾಮ ಸಮಿತಿಗಳ ಮೂಲಕ ಜಿಲ್ಲೆಯ ಎರಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳೆನ್ನದೆ ಶ್ರಮಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಗೆಲುವಿನಲ್ಲಿ ದಸಂಸ ಪ್ರಮುಖ ಪಾತ್ರ ವಹಿಸಿದೆಯೆಂದು ವಿಶ್ವಾಸದಿಂದ ನುಡಿದರು.
ನಿಗಮ- ಅಕ್ರಮ ಸಕ್ರಮದಲ್ಲಿ ಅವಕಾಶ ನೀಡಿ- ನೂತನ ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಮುಖರಿಗೆ ಯಾವುದೇ ನಿಗಮಗಳಲ್ಲಿ ಅಧ್ಯಕ್ಷ ಸ್ಥಾನ, ಅಕ್ರಮ ಸಕ್ರಮ ಸಮಿತಿಗಳಲ್ಲಿ ಸದಸ್ಯ ಸ್ಥಾನಗಳನ್ನು ನೀಡುವಂತೆ ಹೆಚ್.ಎಲ್. ದಿವಾಕರ್ ಇದೇ ಸಂದರ್ಭ ಮನವಿ ಮಾಡಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶೋಷಿತ ದಲಿತ ಸಮೂಹವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಈ ಹಿನ್ನೆಲೆ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಮೂಲಕ ‘ ದಲಿತರನ್ನು ಕಡೆಗಣಿಸಬೇಡಿ’ ಎನ್ನುವ ಸಂದೇಶ ರವಾನೆಯಾಗಿದೆಯೆಂದು ಸ್ಪಷ್ಟಪಡಿಸಿದರು.
‘ಸಿದ್ದು’ಗೆ ದಲಿತ ರತ್ನ ಪ್ರಶಸ್ತಿ- ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದಿಂದ ಮುಂದಿನ ಜೂನ್ ಎರಡನೇ ವಾರದಲ್ಲಿ ಮಡಿಕೇರಿಯಲ್ಲಿ 132ನೇ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಅವರಿಗೆ ‘ದಲಿತ ರತ್ನ’ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ನೀಡಿ ಗೌರವಿಸಲು ಉದ್ದೇಶಿಸಲಾಗಿದೆ. ನಗರದ ಗಾಂಧಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಏಳೆಂಟು ಸಾವಿರ ಜನರು ಸಮಾವೇಶಗೊಳ್ಳುವ ನಿರೀಕ್ಷೆ ಇದ್ದು, ಈ ಸಂದರ್ಭ ನಗರದಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗುವುದೆಂದು ಮಾಹಿತಿಯನ್ನಿತ್ತರು.
ದಸಂಸ ಮಡಿಕೇರಿ ತಾಲ್ಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ದಲಿತ ಸಮುದಾಯವನ್ನು ದಲಿತ ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲದಿರುವುದು, ದಲಿತ ಸಮೂಹಕ್ಕೆ ಜವಾಬ್ದಾರಿಯುತವಾದ ಯಾವುದೇ ಸ್ಥಾನಮಾನಗಳನ್ನು ನೀಡದಿರುವುದು, ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟ ವ್ಯವಸ್ಥೆ, ನಿರಂತರವಾಗಿ ಏರು ಮುಖವಾದ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ, ಡಾ. ಅಂಬೇಡ್ಕರ್ ಗೆ ಅವಮಾನ ಮೊದಲಾದ ಕಾರಣಗಳ ಹಿನ್ನೆಲೆ ಈ ಚುನಾವಣೆಯಲ್ಲಿ ದಸಂಸ ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿ ಬೆಂಬಲಿಸಿದ್ದಾಗಿ ತಿಳಿಸಿದರು,
ಗೋಷ್ಠಿಯಲ್ಲಿ ದಸಂಸ ನಗರ ಸಂಘಟನಾ ಸಂಚಾಲಕ ಪಿ.ಎಂ. ಲೋಕನಾಥ್, ನಗರ ಸಂಚಾಲಕ ಸಿ.ಪಿ. ಸಿದ್ದೇಶ್ವರ್ ಉಪಸ್ಥಿತರಿದ್ದರು.