ಮಡಿಕೇರಿ ಮೇ 25 : ದಕ್ಷಿಣ ಕೊಡಗಿನ ವಾಣಿಜ್ಯಕ ನಗರಿ ಗೋಣಿಕೊಪ್ಪಲಿನಿಂದ ಅನತಿ ದೂರದಲ್ಲಿರುವ ದೇವರಪುರದಲ್ಲಿ ಕಳೆದ ಎರಡು ದಿನಗಳಿಂದ ಆದಿವಾಸಿಗಳ ‘ಬೇಡು ಹಬ್ಬ’ ಮೇಳೈಸಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಹಾಡಿಗಳಲ್ಲಿ ವಾಸವಿರುವ ಬುಡಕಟ್ಟು ಜನಾಂಗದ ವಿಶೇಷ ಹಬ್ಬವೇ ‘ಬೇಡು ಹಬ್ಬ’. ಆದಿವಾಸಿಗಳು ತಮ್ಮ ಆರಾಧ್ಯ ದೇವರಾದ ಭದ್ರಕಾಳಿ ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ನಡೆಸುವ ಈ ಹಬ್ಬಕ್ಕೆ ಪಿರಿಯಾಪಟ್ಟಣ ತಾಲೂಕಿನ ಕಾಡಂಚಿನ ವ್ಯಾಪ್ತಿಯಲ್ಲಿರುವ ಮೂವತ್ತಕ್ಕೂ ಹೆಚ್ಚಿನ ಹಾಡಿಯ ಗಿರಿಜನರು, ನಾಗರಹೊಳೆ ಉದ್ಯಾನವನದ ಅನೇಕ ಹಾಡಿಗಳ ಬುಡಕಟ್ಟು ಜನರು ಪಾಲ್ಗೊಳ್ಳುವುದು ವಿಶೇಷ.
ದೇವರಪುರ ಆಸುಪಾಸಿನ ಗ್ರಾಮಗಳ ಆದಿವಾಸಿಗಳು, ಇತರೆ ಜನಾಂಗದವರು ಕೂಡ ಹರಕೆ ಹೊತ್ತು, ಕಾಡಿನಲ್ಲಿ ಸಿಗುವ ಸೊಪ್ಪು, ಹರಿದ ಹಳೆ ಬಟ್ಟೆ, ಗೋಣಿಚೀಲಗಳು, ಹೀಗೆ ಕೈಗೆ ಸಿಕ್ಕುವ ವಿವಿಧ ವಸ್ತುಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೆಕಾಯಿ ಬುರುಡೆ ಪ್ಲಾಸ್ಟಿಕ್ ಡಬ್ಬ ಹಾಗೂ ಟಿನ್ನುಗಳನ್ನು ತಾಳಮೇಳ ಮಾಡಿಕೊಂಡು ಡೊಳ್ಳಿನ ರೀತಿಯಲ್ಲಿ ಬಡಿದುಕೊಂಡು ಕುಣಿಯುತ್ತ ಸಾಗುವುದು ಹಬ್ಬದ ಸಂದರ್ಭ ಕಾಣುವ ಸಾಮಾನ್ಯ ದೃಶ್ಯ.
ವಿವಿಧ ವೇಷ ತೊಟ್ಟವರು ಭಿಕ್ಷಾಟನೆ ಮಾಡುತ್ತಾ ಹಣ ಹಾಗೂ ದವಸ ಧಾನ್ಯಗಳನ್ನು ಸಂಗ್ರಹಿಸಿ, ದೇವಾಲಯಕ್ಕೆ ತಾವು ಸಂಗ್ರಹಿಸಿದ ದವಸ ಧಾನ್ಯ, ಹನವನ್ನು ಸಲ್ಲಿಸುವುದು ವಾಡಿಕೆ. ಇಂದು ಮಧ್ಯಾಹ್ನ 3 ಗಂಟೆಯ ನಂತರ ದೇವರಪುರದ ಕೀರಾತೇಶ್ವರ, ಭದ್ರಕಾಳಿ ದೇವಾಲಯದ ಮುಂಭಾಗಕ್ಕೆ ಆಗಮಿಸಿದ ವಿವಿಧ ವೇಷಧಾರಿಗಳು ಅಲ್ಲಿ ಕುಣಿಯುತ್ತ ನಂತರ ದೇವರಿಗೆ ಭಂಡಾರವನ್ನ ಹಾಕಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ತೆರಳಿದರು .
ಈ ಬೇಡು ಹಬ್ಬ ‘ಬೈಗುಳದ ಹಬ್ಬ’ವೆಂದೇ ಕರೆಯುತ್ತಾರೆ. ಜಿಲ್ಲೆಯ ವಿವಿಧೆಡೆಗಳಿಂದ ಮತ್ತು ಜಿಲ್ಲೆಯ ಹೊರ ಭಾಗದ ಜನರು ಹಬ್ಬದ ವೀಕ್ಷಣೆಗೆ ಬರುತ್ತಾರೆ. ಹಬ್ಬದ ಹಿನ್ನೆಲೆ ಜಿಲ್ಲಾಡಳಿತ ಗೋಣಿಕೊಪ್ಪಲಿನ 10 ಕಿ.ಮೀ, ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದೆ.