ಮಡಿಕೇರಿ ಮೇ 30 : ಜಿಲ್ಲೆಯ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜೊತೆಗೆ ಸೌಜನ್ಯ, ವಿನಯದಿಂದ ನಡೆದುಕೊಳ್ಳಬೇಕು, ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತಿಸಿದರೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಸಿದ್ದಾರೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆ’ಯಲ್ಲಿ ಮಾತನಾಡಿದರು.
ಪೊಲೀಸ್ ಇಲಾಖೆಯಿಂದ ಮುಂದಿನ 10 ದಿನದೊಳಗೆ ಜಿಲ್ಲೆಯ ಪ್ರತಿಯೊಂದು ಪ್ರವಾಸಿ ತಾಣದಲ್ಲಿ ‘ಪ್ರವಾಸಿ ಫಲಕ’ ಅಳವಡಿಸಲಾಗುವುದು. ಹಾಗೆಯೇ ಮುಖ್ಯ ಹೆದ್ದಾರಿಗಳಲ್ಲಿಯೂ ಸಹ ಸೂಚನಾ ಫಲಕ ಅಳವಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಕೊಡಗು ಜಿಲ್ಲೆಗೆ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಂತವರನ್ನು ಯಾವ ರೀತಿ ಕಾಣಬೇಕು ಎಂಬುದು ತಿಳಿದಿರಬೇಕು. ಅದನ್ನು ಬಿಟ್ಟು ಪ್ರವಾಸಿಗರ ಜೊತೆ ಕೆಟ್ಟದಾಗಿ ವರ್ತಿಸಿದರೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿದೆ ಎಂದು ಖಡಕ್ ಆಗಿ ನುಡಿದರು.
‘ಪ್ರವಾಸಿ ತಾಣಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಪೊಲೀಸ್ ತುರ್ತು ಸೇವೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.’
ಹಳದಿ ಮತ್ತು ಬಿಳಿ ಬಣ್ಣ ಫಲಕದ ವಾಹನಗಳ ನಡುವಿನ ಕಿತ್ತಾಟ ನಿಲ್ಲಬೇಕು. ಕೊಡಗು ಜಿಲ್ಲೆಗೆ ಕೆಟ್ಟ ಹೆಸರು ಬರದಂತೆ ನಡೆದುಕೊಳ್ಳಬೇಕು ಎಂದು ಕೆ.ರಾಮರಾಜನ್ ತಾಕೀತು ಮಾಡಿದರು.
ಪೊಲೀಸ್ ಇಲಾಖೆಯಿಂದ ಹೋಮ್ ಸ್ಟೇಗಳಿಗೆ ಕಾಲಮಿತಿಯಲ್ಲಿ ಎನ್‍ಒಸಿ ನೀಡಲಾಗುತ್ತಿದೆ. ಗಾಂಜಾ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಜೊತೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಅಬ್ಬಿಫಾಲ್ಸ್ ಬಳಿ ಪ್ರವಾಸಿಗರ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದರು.
ಅಬ್ಬಿ ಜಲಪಾತದ ಬಳಿಯ ವಾಹನ ನಿಲುಗಡೆಗೂ, ಬಸ್ ನಿಲುಗಡೆಗೂ ಒಂದುವರೆ ಕಿ.ಮೀ. ದೂರವಿದೆ. ಪದೇ ಪದೇ ವಾಹನ ನಿಲುಗಡೆ ವಿಷಯದಲ್ಲಿ ಕದನ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಡೀನ್ ಬೋಪಣ್ಣ ಮಾತನಾಡಿ, ಸ್ಥಳೀಯ ಗ್ರಾ.ಪಂ.ವತಿಯಿಂದ ಕುಡಿಯುವ ನೀರು, ಶೌಚಾಲಯ ಹಾಗೂ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ನವೀನ್ ಅಂಬೆಕಲ್ಲು ಮಾತನಾಡಿ ಅಬ್ಬಿ ಜಲಪಾತಕ್ಕೆ ತೆರಳುವ ಮಾರ್ಗದ ರಸ್ತೆಯನ್ನು ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಎಂ.ಬಿ.ದೇವಯ್ಯ ಮಾತನಾಡಿ, ಅಬ್ಬಿಜಲಪಾತಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರಲ್ಲದೆ, ಜೊತೆಗೆ ಖಾಸಗಿ ವಾಹನಗಳಿಗೆ ವೇಗದ ಮಿತಿ ಅಳವಡಿಸಬೇಕು ಎಂದರು.
ಕರ್ನಲ್ ಒಬ್ಬರು ಮಾತನಾಡಿ ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಇತ್ತೀಚೆಗೆ ಪ್ರವಾಸಿ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದೆ. ಆ ನಿಟ್ಟಿನಲ್ಲಿ ವಾಹನ ಪಾರ್ಕಿಂಗ್ ದರವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಸೋಮವಾರಪೇಟೆಯ ಮಲ್ಲೇಶ್ ಮಾತನಾಡಿ, ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ಎಂದರೆ ಬರೀ ರಾಜಾಸೀಟು, ಅಬ್ಬಿ ಜಲಪಾತ, ಮಾಂದಲ್ ಪಟ್ಟಿ ಮಾತ್ರವಲ್ಲ, ಸೋಮವಾರಪೇಟೆ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳು ಇದ್ದು, ಅವುಗಳನ್ನು ಸಹ ಅಭಿವೃದ್ಧಿ ಪಡಿಸಬೇಕಿದೆ ಎಂದು ಕೋರಿದರು.
ಪ್ರಮುಖರಾದ ಮೊಂತಿ ಗಣೇಶ್ ಮಾತನಾಡಿ, ಪ್ರವಾಸಿ ತಾಣಗಳಲ್ಲಿ ಗ್ರಾ.ಪಂ.ವತಿಯಿಂದಲೇ ಎಲ್ಲಾ ರೀತಿಯ ಮೂಲಸೌಲಭ್ಯ ಕಲ್ಪಿಸುವುದು, ಜೊತೆಗೆ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ಬಿಜಲಪಾತದಲ್ಲಿ 4 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ 16 ರಿಂದ 18 ಸಾವಿರ ರೂ. ಸಂಗ್ರಹವಾಗುತ್ತಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಯತೀಶ್ ಉಲ್ಲಾಳ್, ಪ್ರಮುಖರಾದ ಭಾಸ್ಕರ್, ರೋಹಿತ್, ಜಗದೀಶ್, ಪ್ರಾದೇಶಿಕ ಸಾರಿಗೆ ಮಧುರ ಇತರರು ಇದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*