ಮಡಿಕೇರಿ ಜೂ.1 : ಕೂಡುಮಂಗಳೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನ’ ಅಂಗವಾಗಿ “ನಮಗೆ ಆಹಾರ ಬೇಕು, ತಂಬಾಕು ಅಲ್ಲ”, ಎಂಬ ಘೋಷವಾಕ್ಯದೊಂದಿಗೆ’ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಡಗು ಜಿಲ್ಲೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ವತಿಯಿಂದ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್, ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಭಿತ್ತಿಫಲಕಗಳನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ತಂಬಾಕಿನ ಯಾವುದೇ ಉತ್ಪನ್ನಗಳನ್ನು ಬಳಸದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ತಂಬಾಕು ರಹಿತ ದಿನದ ಮಹತ್ವ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಪ್ರತಿ ವರ್ಷ ಮೇ 31 ಅನ್ನು ವಿಶ್ವ ತಂಬಾಕು ರಹಿತ ದಿನಾಚರಣೆ ಸಂದರ್ಭದಲ್ಲಿ
ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಪರಿಸರದ ಮೇಲೂ ಅನೇಕ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತದೆ ಎಂದರು.
ಡಿಡಿಪಿಐ ಸಿ.ರಂಗಧಾಮಯ್ಯ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ “ನಮಗೆ ಆಹಾರ ಬೇಕು, ತಂಬಾಕು ಅಲ್ಲ,” ಎಂಬ ಘೋಷವಾಕ್ಯದೊಂದಿಗೆ ತಂಬಾಕು ತ್ಯಜಿಸುವ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಟಿ.ಎಂ.ಪ್ರಕಾಶ್, ಬಿಇಓ ಕೆ.ವಿ.ಸುರೇಶ್, ಗ್ರಾ.ಪಂ.ಅಧ್ಯಕ್ಷೆ ಇಂದಿರಾ ರಮೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ, ಆರ್.ಎಂ.ಎಸ್.ಎ. ಡಿವೈಪಿಸಿ ಸೌಮ್ಯ, ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ, ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಪಿ.ರೇವಣ್ಣ, ಸಮಿತಿ ಸದಸ್ಯರು ಹಾಜರಿದ್ದರು.