ಮಡಿಕೇರಿ ಜೂ.2 : ನಗರದ ರಾಜಾಸೀಟು-ಮುನೀಶ್ವರ ದೇವಾಲಯದ ಸಂಪರ್ಕ ರಸ್ತೆಯನ್ನು ಶೀಘ್ರ ದುರಸ್ತಿಪಡಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ವೀರನಾಡು ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.
ನಗರದ ರಾಜಾಸೀಟು-ಮುನೀಶ್ವರ ದೇವಾಲಯದ ಸಂಪರ್ಕ ರಸ್ತೆಯಲ್ಲಿ ಜಮಾಯಿಸಿದ ವೇದಿಕೆಯ ಪ್ರಮುಖರು ಹಾಗೂ ಸ್ಥಳೀಯರು, ನಗರಸಭೆಯ ವಿರುದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿ, ಹಾನಿಗೀಡಾದ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸದೆ ಮಡಿಕೇರಿ ನಗರಸಭೆ ನಿದ್ರಾವಸ್ಥೆಗೆ ಜಾರಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಹಲವು ಭಾರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ ಮಾಡಲಾಗಿದ್ದರು, ಇಲ್ಲಿಯವೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ದೂರಿದರು.
ಈಗಾಗಲೇ ಈ ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುವಂತಾಗಿದ್ದು, ತಕ್ಷಣ ದುರಸ್ತಿ ಪಡಿಸುವಂತೆ ಒತ್ತಾಯಿಸಿದರು.
ಮುಂಗಾರು ಪ್ರಾರಂಭವಾಗಲಿದ್ದು, ನಗರದ ಸ್ಟೋನ್‍ಹಿಲ್‍ನಲ್ಲಿ ಸುರಿಯಲಾಗುತ್ತಿರುವ ಕಸದಿಂದ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಆಗ್ರಹಿಸಿದ ಅವರು, ನಗರಸಭೆಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು.
ವೇದಿಕೆಯ ನಗರಾಧ್ಯಕ್ಷ ಪ್ರದೀಪ್ ಕರ್ಕೆರ, ಸದಸ್ಯರಾದ ಗಣೇಶ್, ರಾಜ ಹಾಗೂ ಸ್ಥಳೀಯರಾದ ಸಿದ್ದರಾಜು, ದೇವಯ್ಯ, ಗೀತಾ, ಜುಲೇಕಾಬಿ ಸೇರಿದಂತೆ ಮತ್ತಿತರು ಪ್ರತಿಭಟನೆಯಲ್ಲಿ ಹಾಜರಿದ್ದರು.







