ನಾಪೋಕ್ಲು ಜೂ.2 : ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಳೆಗಾಲ ಆರಂಭಕ್ಕೂ ಮೊದಲೇ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾಪೋಕ್ಲು ವ್ಯಾಪ್ತಿಯಲ್ಲಿ ಮುಂಗಾರು ಆರಂಭಕ್ಕೂ ಮೊದಲೇ ಸೆಸ್ಕ್ ಇಲಾಖೆಯವರು ವಿದ್ಯುತ್ ರಸ್ತೆಬದಿಗಳಲ್ಲಿ ಮತ್ತು ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಗೆ ಹೊಂದಿಕೊಂಡಿರುವ ಮರಗಳನ್ನು ತೆರವು ಗೊಳಿಸಬೇಕು, ಅದರಂತೆ ಹಳೆಯ ಕಂಬಗಳನ್ನು ಬದಲಿಸಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಪೂರ್ವ ಸಿದ್ಧತೆಗಳನ್ನು ನಡೆಸಬೇಕಾಗಿತ್ತು. ಆದರೆ ನಾಪೋಕ್ಲು ವಿಭಾಗದಲ್ಲಿ ಇದರಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆರುವುದರಿಂದ ಸಣ್ಣ ಮಳೆಗೆ ವಿದ್ಯುತ್ ಕಡಿತಗೊಂಡು ಜನರು ವಿದ್ಯುತ್ ಸಮಸ್ಯೆಯನ್ನು ಎದುರಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಾಪೋಕ್ಲು ನಾಲ್ಕುನಾಡು ವ್ಯಾಪ್ತಿಯಲ್ಲಿ ಬರುವ ಬಹುತೇಕ ಎಲ್ಲಾ ಕಡೆ ವಿದ್ಯುತ್ ಸಮಸ್ಯೆಯಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಈ ಸಮಸ್ಯೆ ಮುಂಗಾರು ಪ್ರವೇಶಕ್ಕೂ ಮೊದಲೇ ಸೃಷ್ಟಿಯಾಗಿದ್ದು, ಹಳ್ಳಿಗಳಲ್ಲಿ ದಿನನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಇದರಿಂದ ಗೃಹ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟುಹೋಗಿ ಜನರು ನಷ್ಟ ಅನುಭವಿಸುವಂತಾಗಿದೆ.
ನಾಪೋಕ್ಲು ಸೆಸ್ಕ್ ಕಚೇರಿಯಲ್ಲಿ ಬೆರಳೆಣಿಕೆಯ ಸಿಬ್ಬಂದಿಯಿಂದ ಇಡೀ ವ್ಯಾಪ್ತಿಯ ಸಮಸ್ಯೆ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕಾ ಕೇಂದ್ರವನ್ನು ಸ್ಥಾಪಿಸಬೇಕು, ಅದರಂತೆ ಕಚೇರಿಯಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ಈ ವ್ಯಾಪ್ತಿಯಲ್ಲಿ ಜನರು ಅನುಭವಿಸುತ್ತಿರುವ ನಿರಂತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಸೆಸ್ಕ್ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಪರವಂಡ ಸಿರಾಜ್ ಒತ್ತಾಯಿಸಿದ್ದಾರೆ.
ವರದಿ :ಝಕರಿಯ ನಾಪೋಕ್ಲು