ಮಡಿಕೇರಿ ಜೂ.2 : ಪ್ಲಾಸ್ಟಿಕ್ ಅನ್ನು ಪೂರ್ಣ ಪ್ರಮಾಣದಲ್ಲಿ ತ್ಯಜಿಸುವುದರ ಮೂಲಕ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡು ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು” ಎಂಬ ವಿಷಯದ ಕುರಿತು ನಗರದ ಸಂತ ಮೈಕಲರ ಶಾಲಾ ಆವರಣದಲ್ಲಿ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆ ನಡೆಯಿತು.
ಮನುಷ್ಯನ ಜೀವನದಲ್ಲಿ ಉತ್ತಮವಾದ ವಾತಾವರಣ ಹಾಗೂ ಗಾಳಿ ಅತಿ ಅವಶ್ಯಕವಾಗಿದೆ. ಉತ್ತಮವಾದ ವಾತಾವರಣ, ಗಾಳಿ ಬೇಕಾದಲ್ಲಿ ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡಬೇಕು. ಪರಿಸರ ಶುಚಿತ್ವ ನಮ್ಮೆಲ್ಲರ ಹೊಣೆ. ಆದ್ದರಿಂದ ಪ್ರತಿಯೊಬ್ಬರಲ್ಲಿಯೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಪ್ರತಿನಿತ್ಯವೂ ಸಹ ಒಂದೊಂದು ಗಿಡವನ್ನು ನೆಡುವುದರ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಬೇಕು. ಗಿಡ ಬೆಳೆಸಿ ಪರಿಸರ ಸಂರಕ್ಷಿಸಿ ಎಂಬ ಮನೋಭಾವ ಎಲ್ಲರಲ್ಲಿಯೂ ಕಾರ್ಯಗತಗೊಳ್ಳಬೇಕು ಎಂದು ಕೆ.ಟಿ.ಬೇಬಿ ಮ್ಯಾಥ್ಯು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸಿ.ರಂಗಧಾಮಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅವರ ಜವಾಬ್ದಾರಿ ಹಾಗೂ ಪಾತ್ರವನ್ನು ಯಾವ ರೀತಿಯಾಗಿ ನಿರ್ವಹಿಸಬೇಕು ಎಂದು ತಿಳಿಯಬೇಕು. ಪ್ರವಾಸಿಗರಲ್ಲಿ ಸಹ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸುವಂತೆ ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಸಂತ ಮೈಕಲರ ಶಾಲೆಯ ಪ್ರಾಂಶುಪಾಲರಾದ ಜಾನ್ಸನ್ ಹಾಗೂ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಪಾಲ್ಗೊಂಡಿದ್ದರು. ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ 95 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.