ಮಡಿಕೇರಿ ಜೂ.3 : ಕಾಫಿ ತೋಟಕ್ಕೆ ಆಹಾರವರಸಿ ದಾಳಿ ಮಾಡಿದ್ದ ಕಾಡಾನೆಯೊಂದು ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡು ಪರದಾಡಿ, ಅರಣ್ಯ ಇಲಾಖೆಯ ಕಾರ್ಯಾಚರಣೆಯ ಮೂಲಕ ಹೊರಬಂದ ಘಟನೆ ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದಲ್ಲಿ ನಡೆದಿದೆ.
ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಡ ಗ್ರಾಮದ ನಡಿಕೇರಿಯಂಡ ಅಯ್ಯಣ್ಣ ಎಂಬವರ ಕಾಫಿ ತೋಟಕ್ಕೆ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ಸಹಿತ ದಾಳಿ ಇಟ್ಟಿದ್ದವು. ನೀರು ಕುಡಿಯುವ ಭರದಲ್ಲಿ ಕೆರೆಯಲ್ಲಿ ಮಾಲ್ಕಕ್ಕೂ ಹೆಚ್ಚಿನ ಕಾಡಾನೆಗಳು ಸಿಲುಕಿ ಕೊಂಡಿದ್ದವು. ಇತರ ಆನೆಗಳು ಹರ ಸಾಹಸ ಪಟ್ಟು ಕೆರೆಯಿಂದ ಹೊರ ಬರುವಲ್ಲಿ ಯಶಸ್ವಿಯಾಗಿದ್ದರೆ, ಒಂದು ಕಾಡಾನೆಗೆ ಮಾತ್ರ ಕೆರೆಯಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ತೋಟ ಮಾಲೀಕರು ಮಾಹಿತಿ ನೀಡಿದ ಮೇರೆ ವಿರಾಜಪೇಟೆ ಅರಣ್ಯ ವಲಯದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಕೆರೆಯ ಒಂದು ಭಾಗವನ್ನು ಅಗೆದು, ಮರದ ದಿಮ್ಮಿಗಳನ್ನು ಜೋಡಿಸಿ, ಕಾಡಾನೆ ಕೆರೆಯಿಂದ ಹೊರ ಬರುವುದಕ್ಕೆ ಅನುವು ಮಾಡಿಕೊಟ್ಟರು.
ಇಲಾಖಾ ಸಿಬ್ಬಂದಿಗಳ ಮೂರು ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಕಾಡಾನೆ ಕೆರೆಯಿಂದ ಹೊರ ಬರುವಲ್ಲಿ ಯಶಸ್ವಿಯಾಯಿತು. ಬಳಿಕ ನೀರಿನಲ್ಲಿ ಸಿಲುಕಿ ಗಾಬರಿಯಾಗಿ ಆಕ್ರೋಶಗೊಂಡಿದ್ದ ಕಾಡಾನೆಯನ್ನು ಪಟಾಕಿ ಸಿಡಿಸಿ ಹೊರಕ್ಕೆ ಓಡಿಸುವಲ್ಲಿ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾದರು.
ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶರಣಬಸಪ್ಪ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ. ಎ. ನೆಹರೂರವರ ಮಾರ್ಗದರ್ಶನದಲ್ಲಿ ಹಾಗೂ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಕಳ್ಳಿರ ಎಂ. ದೇವಯ್ಯರವರ ನೇತೃತ್ವದಲ್ಲಿ ಉಪ ವಲಯ ಅರಣ್ಯಧಿಕಾರಿಗಳದ ಅನಿಲ್ ಸಿ.ಟಿ., ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕರಾದ ಮಾಲತೇಶ್ ಬಡಿಗೇರ್ ಹಾಗೂ ಆರ್. ಆರ್. ಟಿ ಸಿಬ್ಬಂದಿಗಳಾದ ಸುರೇಶ, ಅನಿಲ್, ವಿಕಾಸ್, ಮಹೇಶ್, ಲತೇಶ, ಭರತ್, ನಾಣಯ್ಯ, ಸುರೇಶ, ಅಶ್ವಥ್, ನಾಚಪ್ಪ ಹಾಗೂ ವಾಹನ ಚಾಲಕ ಅಶೋಕ್‍ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.