ಮಡಿಕೇರಿ ಜೂ.3 : ಕೊಡಗಿನ ಮೂಲಭೂತ ಸಮಸ್ಯೆಗಳ ಬಗೆಹರಿಕೆಗೆ ಅಗತ್ಯವಾದ ‘ಸಚಿವ’ ಸ್ಥಾನ ಜಿಲ್ಲೆಯ ಶಾಸಕ ಅಜ್ಜಿಕುಟ್ಟೀರ ಪೊನ್ನಣ್ಣ ಅವರಿಗೆ ಕೈತಪ್ಪಿರುವುದು ಜಿಲ್ಲೆಯ ಕಾಂಗ್ರೆಸ್ ಪ್ರಮುಖರು ಮತ್ತು ಕಾರ್ಯಕರ್ತರಿಗೆ ಅತೀವ ನೋವನ್ನು ಉಂಟುಮಾಡಿದೆಯೆಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎರಡು ಕ್ಷೇತ್ರಗಳ ಚುನಾವಣೆಯ ಹಂತದಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವ ಕುಮಾರ್ ಅವರು, ಕೊಡಗಿನಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಪಡೆದುಕೊಂಡಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಇಂದು ಅವರ ಭರವಸೆ ಈಡೇರಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರನ್ನಾಗಿ ನಿಯುಕ್ತಿಗೊಳಿಸಿ, ಕ್ಯಾಬಿನೆಟ್ ಸಚಿವ ಸ್ಥಾನದ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಇದು ಸಂತಸವನ್ನು ಉಂಟುಮಾಡಿದೆಯಾದರು, ಕೊಡಗಿನ ಮೂಲಭೂತ ಸಮಸ್ಯೆಗಳನ್ನು ಸಚಿವ ಸಂಪುಟದ ಮುಂದಿಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವ ಸ್ಥಾನದ ಅಗತ್ಯವಿದೆಯೆಂದು ಒತ್ತಿ ನುಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೊಡಗು ಭೌಗೋಳಿಕವಾಗಿ ಮತ್ತು ಸಾಂಸ್ಕøತಿಕವಾಗಿ ಇತರೆ ಎಲ್ಲಾ ಜಿಲ್ಲೆಗಳಿಗಿಂತ ವಿಭಿನ್ನವಾಗಿದೆ ಮತ್ತು ಹತ್ತು ಹಲ ಸಮಸ್ಯೆಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ನೀಡದಿರುವ ಮಾನದಂಡ ಸಮರ್ಪಕವಲ್ಲ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಎರಡು ಸರ್ಕಾರಗಳಲ್ಲಿ ಅಡಿಷನಲ್ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿದವರು ಮಾತ್ರವಲ್ಲದೆ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಇವರು ಯಾವುದೇ ಖಾತೆಯನ್ನು ನಿರ್ವಹಿಸುವ ಎಲ್ಲಾ ಸಾಮಥ್ರ್ಯ ಹೊಂದಿದವರಾಗಿದ್ದಾರೆ. ಈ ಹಿನ್ನೆಲೆ ಮುಖ್ಯ ಮಂತ್ರಿಗಳು ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವತ್ತ ಚಿಂತನೆ ಹರಿಸಬೇಕೆಂದು ಮನವಿ ಮಾಡಿದರು.
ಅನ್ಯಾಯ ಸರಿಪಡಿಸಿ- ಕೊಡಗಿನ ಕೊಡವ ಮತ್ತು ಅರೆ ಭಾಷಿಕ ಸಮುದಾಯ ಅತ್ಯಂತ ಸೂಕ್ಷ್ಮ ಅಲ್ಪಸಂಖ್ಯಾತ ಸಮೂಹಕ್ಕೆ ಒಳಪಡುವ ಜನಾಂಗಗಳಾಗಿದ್ದು, ಸೇನಾ ಕ್ಷೇತ್ರ, ಕ್ರೀಡಾಕ್ಷೇತ್ರಗಳಿಗೆ ಇವರು ನೀಡಿರುವ ಅನುಪಮ ಕೊಡುಗೆ, ವಾರ್ಷಿಕವಾಗಿ ಕಾಫಿ ಕೃಷಿಯಿಂದ ಸರ್ಕಾರಕ್ಕೆ ದೊರಕುವ ಆದಾಯ ಮೊದಲಾದವುಗಳನ್ನು ಪರಿಗಣಿಸಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನಿಡಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದರಿಂದ ಜಿಲ್ಲೆಯ ಶಾಸಕರಿಗೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿಗಳು ಅರಿತು ಇನ್ನಾದರು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಕೊಡಗಿನ ಸಮಸ್ಯೆಗಳ ಬಗೆಹರಿಕೆಗೆ ಒತ್ತು ನೀಡಿ- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಪುನರ್ ರಚನೆಯ ಸಂದರ್ಭ ಪೊನ್ನಣ್ಣ ಅವರಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಅಲ್ಲಿಯವರೆಗೆ ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬಗೆಹರಿಕೆಯೊಂದಿಗೆ, ವಿರಾಜಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಸಂದರ್ಭ ಹೊರತರಲಾಗಿರುವ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪೂರೈಸಲು ಒತ್ತು ನೀಡಬೇಕೆಂದರು.
ಶಾಸಕ ಪೊನ್ನಣ್ಣ ಅವರು ತಮ್ಮ ಕ್ಷೇತ್ರದ ಪ್ರಣಾಳಿಕೆಯಲ್ಲಿ ತೋರಿಸಲಾಗಿರುವ ಭ್ರಷ್ಟಾಚಾರ ನಿರ್ಮೂಲನೆಯ ಮೂಲಕ ವಿರಾಜಪೇಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುವುದು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕ್ಷೇತ್ರದ ವ್ಯಾಪ್ತಿಗೆ ಬರುವ ವಿರಾಜಪೇಟೆ , ಪೊನ್ನಪೇಟೆ ಮತ್ತು ಮಡಿಕೇರಿ ತಾಲ್ಲೂಕಿನ ಕೆಲ ಭಾಗಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಮೂರು ಸರ್ವೇ ಕಛೇರಿ ತೆರೆಯುವುದು, ಕ್ರೀಡಾ ಚಟುವಟಿಕೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು, ಹಾಡಿಯ ಜನರಿಗೆ ಮೂಲ ಸೌಲಭ್ಯ, ಆನೆ–ಮಾನವ ಸಂಘರ್ಷ ಪರಿಹಾರಕ್ಕೆ ತಮ್ಮ ಅಧಿಕಾರದ ಅವಧಿಯಲ್ಲಿ ಕಟಿಬದ್ಧರಾಗಿ ಶ್ರಮಿಸಲಿದ್ದಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮುಂದಿನ ಎಂಪಿ ಚುನಾವಣೆಗೆ ದಿಕ್ಸೂಚಿ- ವಿಧಾನ ಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ. ಆ ಚುನಾವಣೆಗಳಲ್ಲೂ ಕಾಂಗ್ರೆಸ್‍ನ್ನು ಜನತೆ ಆಶೀರ್ವದಿಸಲಿದ್ದಾರೆಂದು ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದರು,
ಜಿಲ್ಲೆಯಲ್ಲಿ ಸುದೀರ್ಘ ಆಡಳಿತ ನಡೆಸಿದ ಬಿಜೆಪಿ ಶಾಸಕರು, ಜಿಲ್ಲೆಯನ್ನು ಪ್ರತಿನಿಧಿಸಿದ ಸಂಸದರು ಸ್ಥಳೀಯ ಮೂಲ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಇದರಿಂದ ಬಿಜೆಪಿಯ ಸಾಂಪ್ರದಾಯಿಕ ಮತದಾರರು ಭ್ರಮನಿರಸನಗೊಂಡು ಬದಲಾವಣೆ ಬಯಸಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮುಂಬರುವ ಚುನಾವಣೆಗಳಲ್ಲು ಕಾಂಗ್ರೆಸ್ ಯಶಸ್ಸನ್ನು ಪಡೆಯುತ್ತದೆನ್ನುವ ವಿಶ್ವಾಸ ವ್ಯಕ್ತಪಡಿಸಿದರು.