ಮಡಿಕೇರಿ ಜೂ.6 : ಕಂಡಕರೆ ಗಾಂಧಿ ಯುವಕ ಸಂಘದ ವತಿಯಿಂದ ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಲೆಯ ದೈಹಿಕ ಶಿಕ್ಷಕ ಎಚ್. ದಿನಕರ್ ಶೆಟ್ಟಿ, ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಪರಿಸರವನ್ನು ಉಳಿಸಿದರೆ ಮಾತ್ರ ನಮಗೆ ಆರೋಗ್ಯವಾದ ಜೀವನ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗಾಂಧಿ ಯುವಕ ಸಂಘದ ಅಧ್ಯಕ್ಷ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಕನಿಷ್ಠ ಒಂದು ಗಿಡವನ್ನು ನೆಟ್ಟು ಬೆಳೆಸಬೇಕಾಗಿದೆ.
ನಶಿಸಿ ಹೋಗುತ್ತಿರುವ ನಮ್ಮ ಪರಿಸರವನ್ನು ಉಳಿಸಿ, ಬೆಳೆಸಬೇಕಾಗಿರುವುದು
ಎಲ್ಲರ ಜವಬ್ದಾರಿಯಾಗಿದೆ. ಶಾಲೆಯ ಪರಿಸರವನ್ನು ಶುಚಿತ್ವದಿಂಡುವುದು ವಿದ್ಯಾರ್ಥಿಗಳು ಕರ್ತವ್ಯವಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ನೆನಪಿಗಾಗಿ ಗಿಡವನ್ನು ನೆಟ್ಟು ಬೆಳೆಸಬೇಕು.
ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಿಸಿ, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಗಾಂಧಿ ಯುವಕ ಸಂಘದಿಂದ ಪರಿಸರದ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಚಾಕಲೇಟ್ ವಿತರಿಸಲಾಯಿತು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಎಂ.ಪಿ.ಧನುಪ್ರಕಾಶ್, ಸಹ ಶಿಕ್ಷಕಿ ಟಿ.ಪಿ.ಜನಿತ, ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎಂ.ಷರೀಫ್ , ಉಪಾಧ್ಯಕ್ಷ ಸವಾದ್ ಉಸ್ಮಾನ್, ಸದಸ್ಯರಾದ ಮುಬಶ್ಶೀರ್ ಹಾಗೂ ನೌಶೀರ್ ಇದ್ದರು.