ಮಡಿಕೇರಿ ಜೂ.6 : ಪರಿಸರ ಅಸಮತೋಲನದಿಂದ ಇತ್ತೀಚಿನ ವರ್ಷಗಳಲ್ಲಿ ಎರಡರಿಂದ ಎರಡೂವರೆ ಡಿಗ್ರಿ ಉಷ್ಟಾಂಶ ಹೆಚ್ಚಾಗುತ್ತಿದೆ ಎಂದು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ಹಸಿರು ಪಡೆ, ಕೊಡಗು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ನೂತನ ನ್ಯಾಯಾಲಯ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅರಣ್ಯ ಮತ್ತು ವನ್ಯ ಸಂಪತ್ತು ಸಂರಕ್ಷಣೆ ಮಾಡಿದ್ದಲ್ಲಿ, ಪರಿಸರ ಸಮತೋಲನ ಕಾಣಲು ಸಾಧ್ಯ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರತಿಪಾದಿಸಿದರು.
ವಿಶ್ವದಲ್ಲಿ 400 ರಿಂದ 500 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಪ್ಲಾಸ್ಟಿಕ್‍ನ್ನು ಬಳಕೆ ಮಾಡಲಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಬಳಸಿದ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ತಿಳಿಸಿದರು.
ಭೂಮಂಡಲದಲ್ಲಿ ಭೂಮಿಯ ಮೇಲಿನ ನೀರು ಕಡಿಮೆಯಾಗುತ್ತಿದೆ. ಸಮುದ್ರ ಮಟ್ಟ ಹೆಚ್ಚಾಗುತ್ತಿದೆ. ಆದ್ದರಿಂದ ಮಾನವ ಸಂಕುಲ, ಜೊತೆಗೆ ಅರಣ್ಯ ಮತ್ತು ವನ್ಯ ಸಂಪತ್ತನ್ನು ಉಳಿಸಿ ಬೆಳೆಸುವಂತಾಗಲು. ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಪರಿಸರ ಸಂರಕ್ಷಣೆಗೆ ಹಿಂದಿಗಿಂತ ಇಂದು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಿ.ಎನ್.ಎಲ್.ಮೂರ್ತಿ ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕು. ಆ ನಿಟ್ಟಿನಲ್ಲಿ ಅಂಗಡಿ, ಮಾರುಕಟ್ಟೆಗೆ ತೆರಳುವಾಗ ಕಡ್ಡಾಯವಾಗಿ ಬಟ್ಟೆ ಬ್ಯಾಗನ್ನು ಬಳಸಬೇಕು ಎಂದು ಹೇಳಿದರು.
ಏಕ ಬಳಕೆಯ ಪ್ಲಾಸ್ಟಿಕ್‍ಗಳಾದ ತಟ್ಟೆ, ಲೋಟ ಬಳಸುವುದನ್ನು ಈಗಾಗಲೇ ನಿಷೇಧಿಸಲಾಗಿದ್ದು, ಮದುವೆ ಇತರೆ ಕಾರ್ಯಕ್ರಮಗಳಲ್ಲಿ ಬಳಸುವುದು ಕಂಡುಬಂದಲ್ಲಿ ಹತ್ತಿರದ ತಾಲ್ಲೂಕು ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.
ಪರಿಸರ ಅಸಮತೋಲನದಿಂದ ಹಲವು ವೈರುದ್ಯಗಳನ್ನು ಕಾಣುತ್ತೇವೆ. ಮಳೆಗಾಲದಲ್ಲಿ ಮಳೆಯಾಗದಿರುವುದು ಅಥವಾ ಸರಾಸರಿಗಿಂತ ಹೆಚ್ಚು ಮಳೆಯಾಗುವುದು. ಹೀಗೆ ಹಲವು ರೀತಿಯ ವಾತಾವರಣದಲ್ಲಿನ ಅಸಮತೋಲನವನ್ನು ಕಾಣುತ್ತೇವೆ. ಆದ್ದರಿಂದ ಮನೆಯ ಸುತ್ತಮುತ್ತ ಗಿಡ ಮರ ನೆಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುತ್ತೇವೆ, ಪ್ಲಾಸ್ಟಿಕ್‍ನ್ನು ತ್ಯಜಿಸುತ್ತೇವೆ, ಗಿಡ ನೆಟ್ಟು ಮರ ಬೆಳೆಸುತ್ತೇವೆ ಎಂಬುದು ಬರಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಒತ್ತಿ ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಡಿ.ಟಿ.ಪುಟ್ಟರಂಗಸ್ವಾಮಿ ಮಾತನಾಡಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ. ಪರಿಸರ ಉಳಿದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಬದುಕು ನಡೆಸಲು ಸಾಧ್ಯ ಎಂದು ತಿಳಿಸಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ನೆಲ-ಜಲ, ಅರಣ್ಯ, ವನ್ಯಜೀವಿಗಳು, ಪರಿಸರ ಹಾಗೂ ಜೀವ ವೈವಿಧ್ಯ ಸಂರಕ್ಷಣೆಯನ್ನು ಮಾಡುತ್ತೇವೆ. ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯನ್ನುಂಟು ಮಾಡುವುದಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡ ನೆಟ್ಟು ಅದನ್ನು ಪೋಷಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮ್‍ಕುಮಾರ್ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಸ್ವಚ್ಛ ಗ್ರಾಮ ಆರೋಗ್ಯಧಾಮ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಗಟ್ಟಿ, ಜೈವಿಕ ಇಂಧನ ಭವಿಷ್ಯದ ಇಂಧನ, ಬೈಸಿಕಲ್ ಬಳಸಿ ಇಂಧನ ಉಳಿಸಿ, ಜಲವೇ ಜೀವಜಾಲ-ಹಸಿರೇ ಉಸಿರು, ಕುಡಿಯಿರಿ ಶುದ್ಧಜಲ ಉಳಿಸಿರಿ ಅಂತರ್ಜಲ, ಜೀವ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡು ಬೆಳೆಸಿ ನಾಡು ಉಳಿಸಿ, ಮನೆಗೊಂದು ಮರ ಊರಿಗೊಂದು ವನ, ಭುಮಿಯೊಂದೇ ಭವಿಷ್ಯವೊಂದೇ, ಸ್ವಚ್ಛ ಶಾಲಾ ಪರಿಸರ ಕಲಿಯಲು ಅನುಕೂಲಕರ, ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪಶ್ಚಿಮಘಟ್ಟ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡೇ ರಾಷ್ಟ್ರದ ಸಂಪತ್ತು, ಕಾಡಿಗೆ ಬೆಂಕಿ ನಾಡಿಗೆ ಆಪತ್ತು, ಅರಣ್ಯ ಮರ್ದನ ಮಾನವ ರೋಧನ, ನೀರನ್ನು ಮಿತವಾಗಿ ಬಳಸಿ, ಬೆಂಕಿಯಿಂದ ಅರಣ್ಯ ರಕ್ಷಿಸಿ, ಅರಣ್ಯ ಸಂಪತ್ತು ಸಂರಕ್ಷಿಸಿ ವನ್ಯಜೀವಿ ಸಂತತಿ ಉಳಿಸಿ, ಮರ ಬೆಳೆಸೋಣ, ವನ್ಯಜೀವಿ ಸಂರಕ್ಷಿಸೋಣ-ಪರಿಸರ ಉಳಿಸೋಣ ಎಂಬ ಘೋಷ ವಾಕ್ಯ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಕೆ.ಬಿ.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪೂವಯ್ಯ, ಶಿವರಾಮ ಬಾಬು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಡಿವೈಪಿಸಿ ಸೌಮ್ಯ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿಮ್ಯಾಥ್ಯೂ, ಜಿಲ್ಲಾ ಸ್ಕೌಟ್ಸ್‍ನ ಆಯುಕ್ತ ಜಿಮ್ಮಿ ಸಿಕ್ವೇರಾ, ಜಿಲ್ಲಾ ಸಹ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಪರಿಸರ ಅಧಿಕಾರಿ ಕೆ.ಕೀರ್ತಿ ಕುಮಾರ್, ಉಪ ಪರಿಸರ ಅಧಿಕಾರಿ ಎಸ್.ಪ್ರದೀಪ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಸಂಯೋಜಕರಾದ ದಮಯಂತಿ, ಇತರರು ಹಾಜರಿದ್ದರು.
ಪರಿಸರ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಟಿ.ಜಿ.ಪ್ರೇಮ್ ಕುಮಾರ್ ಸ್ವಾಗತಿಸಿದರು. ಜೂನಿಯರ್ ಕಾಲೇಜಿನ ವಿದ್ಯಾರ್ಥಿನೀಯರು ಪ್ರಾರ್ಥಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿದರು.
ಪರಿಸರ ದಿನಾಚರಣೆ ಜಾಥಾಗೆ ಚಾಲನೆ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಜಾಥಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಚಾಲನೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶ ಕೆ.ಬಿ.ಪ್ರಸಾದ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ರಾಘವ, ಎನ್‍ಎಸ್‍ಎಸ್ ಅಧಿಕಾರಿ ಗಾಯತ್ರಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ನಗರದ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.
Breaking News
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*
- *ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ*
- *ಕಾರಾಗೃಹ ವಾರ್ಡನ್ ಹುದ್ದೆಗೆ ಆಹ್ವಾನ*
- *ವೀರ ಸೇನಾನಿಗಳಿಗೆ ಅಗೌರವ : ಕುಲಾಲ ಕುಂಬಾರ ಸಂಘ ಖಂಡನೆ*
- *ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ*
- *ಆರೋಪಿಯ ಗಡಿಪಾರಿಗೆ ಹಿಂದು ಜಾಗರಣ ವೇದಿಕೆ ಒತ್ತಾಯ*
- *ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧಾ ಕಾರ್ಯಕ್ರಮ*
- *ಸೋಮವಾರಪೇಟೆ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ*