ಬೆಂಗಳೂರು ಜೂ.15 : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಲಕ್ಷ್ಮಿ’ ಯೋಜನೆಗೆ ಜೂ.16 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ನವರಿಗೆ ಈ ಯೋಜನೆ ಲಾಭ ಸಿಗುತ್ತದೆ. ನಾಳೆಯಿಂದ ಆಫ್ ಲೈನ್ ಹಾಗೂ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಜೂ.16ರ ಮಧ್ಯಾಹ್ನ 1.30ಕ್ಕೆ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಸಿ.ಎಂ ಸಿದ್ದರಾಮಯ್ಯ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಚಾಲನೆ ನೀಡಲಿದ್ದಾರೆ. ಶಕ್ತಿಭವನದಲ್ಲಿ ಸೇವಾ ಸಿಂಧು ವೆಬ್ಪೋರ್ಟಲ್ ನ್ನು ಸಿಎಂ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.