ಮಡಿಕೇರಿ ಜೂ.15 : ಜಿಲ್ಲೆಯಲ್ಲಿ ಮಲೆನಾಡು ರಕ್ಷಣಾ ಸೇನೆ ಅಸ್ಥಿತ್ವಕ್ಕೆ ಬಂದಿದ್ದು, ಜಿಲ್ಲಾ ಮತ್ತು ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದು ಮಲೆನಾಡು ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ರಕ್ಷಿತ್ ರವೀಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ, ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಅವರು ಕೊಡಗು ಜಿಲ್ಲಾಧ್ಯಕ್ಷನ್ನಾಗಿ ತನ್ನನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪದಾಧಿಕಾರಿಗಳ ನೇಮಕ ಮತ್ತು ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ನೇತೃತ್ವದಲ್ಲಿ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕನ್ನಡಪರ ಧ್ವನಿ ಎತ್ತಲು ಯಾವುದೇ ಸಂಘಟನೆ ಮುಂದೆ ಬರದೇ ರಾಜಕೀಯ ಪ್ರೇರಿತವಾಗಿ ನಡಿಯುತ್ತಿದೆ. ಆದ್ದರಿಂದ ಕನ್ನಡ ಪರ, ರೈತರ ಪರ ಹಾಗೂ ಜಿಲ್ಲೆಯ ಜ್ವಲಾಂತ ಸಮಸ್ಯೆಗಳ ಬಗ್ಗೆ ಸಂಘಟನೆ ವತಿಯಿಂದ ಕಾಳಜಿ ವಹಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಮಲೆನಾಡಿನ ಸಂರಕ್ಷಣೆಗಾಗಿ ಪಣ ತೊಡುವುದರ ಜತೆಗೆ ನೆಲ-ಜಲ, ನಾಡು-ನುಡಿ ಸಂರಕ್ಷಣೆಗೆ ಹೋರಾಟ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಮುಂದಿನ ದಿನಗಳಲ್ಲಿ ಸಂಘಟನೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಂಘಟನೆಗೆ ಸೇರಲು ಆಸಕ್ತಿ ಹೊಂದಿರುವವರು ಜಾತಿ, ಧರ್ಮ ರಹಿತವಾಗಿ ಮಲೆನಾಡು ರಕ್ಷಣಾ ಸೇನೆಗೆ ಸೇರ್ಪಡೆಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9480929749, 9611092949 ಸಂಪರ್ಕಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯತೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪೃಥ್ವಿ ಗೌಡಳ್ಳಿ, ಸಂಘಟನಾ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.









