ನಾಪೋಕ್ಲು ಜೂ.15 : ಮಡಿಕೇರಿಯಿಂದ ಮೂರ್ನಾಡು, ಕುಂಬಳದಾಳು ಮೂಲಕ ನಾಪೋಕ್ಲುವನ್ನು ಸಂಪರ್ಕಿಸುವ ನೂತನ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಗೊಂಡಿದ್ದು, ಆರಂಭಿಕ ದಿನದಂದು ಮಹಿಳೆಯರು ಉಚಿತ ಪ್ರಯಾಣ ಮಾಡಿ ಸಂಭ್ರಮಿಸಿದರು.
ಮಡಿಕೇರಿಯಿಂದ ಮಧ್ಯಾಹ್ನ 12.30 ಕ್ಕೆ ಹೊರಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು 1.15 ಕ್ಕೆ ನಾಪೋಕ್ಲು ತಲುಪಲಿದ್ದು ಅದೇ ರಸ್ತೆಯಲ್ಲಿ ಹಿಂದಿರುಗಲಿದೆ.
ಶಾಸಕ ಡಾ.ಮಂಥರ್ ಗೌಡ ಅವರಿಗೆ ಕುಂಬಳಗಾಳು ಗ್ರಾಮಸ್ಥರು
ಬಸ್ ಸಂಚಾರ ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಉಪಯೋಗಕ್ಕಾಗಿ ಈ ಬಸ್ ಸೌಲಭ್ಯವನ್ನು ಕಲ್ಪಿಸಿರುವುದು ಗ್ರಾಮಸ್ಥರ ಪ್ರಶಂಸೆಗೆ ಕಾರಣವಾಗಿದೆ.ಈ ಸಂದರ್ಭ ಬಸ್ ಸಂಚಾರದ ಉದ್ಘಾಟನೆಯನ್ನು ಕುಂಬಳದಾಳು ಅಂಗನವಾಡಿ ಕೇಂದ್ರದ ಸಮೀಪ ನೆರವೇರಿಸಿ ಮಹಿಳೆಯರು ಸಂಭ್ರಮಿಸಿದರು.
ಸಂಜೀವಿನಿ ಸ್ವಸಹಾಯ ಸಂಘದ ಮುಖ್ಯಸ್ಥೆ ವೀಣಾ ಕುಮಾರಿ, ಅಂಗನವಾಡಿ ಕಾರ್ಯಕರ್ತೆ ಅನುರಾವತಿ ಬಸ್ಸಿಗೆ ಹೂವಿನ ಮಾಲೆ ಹಾಕಿ ಆರತಿ ಎತ್ತಿ ಈಡುಗಾಯಿ ಒಡೆಯುವುದರ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯ್ತಿ ಸದಸ್ಯರಾದ ಕಡ್ಲೆರ ಟೈನಿ, ಚೌರೀರ ನವೀನ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಹಿಳೆಯರು ತಮ್ಮ ಆಧಾರ್ ಕಾರ್ಡ್ಗಳನ್ನು ತೋರಿಸಿ ಬಸ್ನಲ್ಲಿ ಪ್ರಯಾಣಿಸಿದರು.