ಮಡಿಕೇರಿ ಜೂ.19 : ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆ ವತಿಯಿಂದ ಶಾಸಕ ಡಾ. ಮಂಥರ್ ಗೌಡ
ಅವರನ್ನು ಸನ್ಮಾನಿಸಲಾಯಿತು.
ನಗರದ ಬ್ರಹ್ಮಾಕುಮಾರೀಸ್ ಲೈಟ್ ಹೌಸ್ ಸಭಾಂಗಣದಲ್ಲಿ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರೀಜಿ ಆಶೀರ್ವದಿಸಿ, ಪರಮಾತ್ಮನ ಶಕ್ತಿ ಮತ್ತು ಸ್ಮೃತಿಯಿಂದ ತಮ್ಮ ಕಾರ್ಯದಲ್ಲಿ ವಿಜಯಿಗಳಾಗಿ ಎಂದು ಹಾರೈಸಿ, ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಉಡುಗೊರೆಯೊಂದಿಗೆ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ನಿಮ್ಮೆಲ್ಲರ ಮಾರ್ಗದರ್ಶನದಿಂದ ಆತ್ಮತೃಪ್ತಿಯಿಂದ ಜನಸೇವೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ, ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಕಾಶ್, ರಾಜೇಶ್ವರಿ ವಿದ್ಯಾ ಸಂಸ್ಥೆಯ ನಿರ್ದೇಶಕರು ಹಾಗೂ ವಕೀಲರಾದ ಸಚಿನ್ ವಾಸುದೇವ್ , ಕೊಡಗು ಡಿ.ಸಿ.ಸಿ. ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಪ್ರೇಮ ಕರುಂಬಯ್ಯ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಬ್ರಹ್ಮಾಕುಮಾರೀಸ್ ಶಾಖೆಯ ಎಲ್ಲಾ ರಾಜಯೋಗ ಶಿಕ್ಷಕಿಯರು ಹಾಜರಿದ್ದರು. ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕ ನಿರೂಪಿಸಿದರು. ಕೊನೆಯಲ್ಲಿ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.








