ಮಡಿಕೇರಿ ಜೂ.20 : ಸರ್ಕಾರದ ಎಲ್ಲಾ ಯೋಜನೆಗಳನ್ನು ನಿಯಮಾನುಸಾರ ಅನುಷ್ಟಾನಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ಆಕಾಶ್ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಡಿಕೇರಿ ತಾಲೂಕು ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿ.ಪಂ.ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಹಲವು ಯೋಜನೆಗಳು ಪ್ರಗತಿ ಹಂತದಲ್ಲಿದೆ. ಇವುಗಳನ್ನು ಕಾಲಮಿತಿಯೊಳಗೆ ಅನುಷ್ಟಾನಿಸಿ ಸಂಪೂರ್ಣ ಪ್ರಗತಿ ಸಾಧಿಸಬೇಕು. ನಿಯಮಾನುಸಾರ ಗ್ರಾಮಪಂಚಾಯಿತಿಗಳು ಕಂದಾಯ ಸಂಗ್ರಹಣೆ ಮಾಡುವಂತೆ ಸೂಚನೆ ನೀಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮಪಂಚಾಯತ್ ಗಳು ಮಹಿಳಾ ಸ್ವ ಸಹಾಯ ಸಂಘಗಳ ಸಹಕಾರದೊಂದಿಗೆ ಸೂಕ್ತ ರೀತಿಯಲ್ಲಿ ಘನ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಳನ್ನು ಕೈಗೊಳ್ಳಬೇಕು. ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಒದಗಿಸಬೇಕು. ಯಾವುದೇ ಗ್ರಾಮಪಂಚಾಯಿತಿಗಳಲ್ಲಿ ಶೂನ್ಯ ಮಾನವದಿನ ಸೃಜನೆಯಾಗದಂತೆ ಕ್ರಮವಹಿಸಬೇಕು. ನಿಗದಿತ ಗುರಿಗೆ ಎದುರಾಗಿ ಸೂಕ್ತ ಪ್ರಗತಿ ಸಾಧಿಸುವಂತೆ ತಿಳಿಸಿದರು.
ಈಗಾಗಲೇ ಅಮೃತ ಸರೋವರ ಯೋಜನೆಯಡಿ ತಾಲೂಕಿಗೆ ನಿಗದಿ ಪಡಿಸಿರುವ ಅಮೃತಸರೋವರಗಳ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಮುಕ್ತಾಯಗೊಳಿಸಿ, ಆಗಸ್ಟ್ 15 ರಂದು ಧಜಾರೋಹಣ ನಡೆಸುವಂತೆ ತಿಳಿಸಿದರು.
ಉಳಿದಂತೆ ವಸತಿ ಮತ್ತು ಎನ್ ಆರ್ ಎಲ್ ಎಂ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಟಾನಿಸಿ ಜನಪರವಾಗಿ ಕಾರ್ಯನಿರ್ವಹಿಸುವಂತೆ ಪಿಡಿಒಗಳಿಗೆ ಕಿವಿಮಾತು ಹೇಳಿದರು.
ಬಹುಮಾನ ವಿತರಣೆ: ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಿದ್ದ ‘ಸೆಲ್ಫಿ ಕಂಟೆಸ್ಟ್’ ಸ್ಪರ್ಧೆ ವಿಜೇತರಿಗೆ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್ ಬಹುಮಾನ ವಿತರಿಸಿದರು.
ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಯಾ ಮತ್ತು ಶ್ವೇತಾ ಅವರಿಗೆ ಪ್ರಶಂಸನಾ ಪತ್ರ ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಯೋಜನಾ ನಿರ್ದೇಶಕರಾದ ಜಗದೀಶ್, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಇತರರು ಹಾಜರಿದ್ದರು.








