ಸೋಮವಾರಪೇಟೆ ಜೂ.21 : ಕಾಫಿ ಬೆಳೆಗಾರರ 10 ಎಚ್.ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಹಾಗೂ ಬೆಳೆಗಾರರ ವಿದ್ಯುತ್‍ಬಿಲ್ ಬಾಕಿ ಮನ್ನಾಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದೆಂದು ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.
ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಸಫಾಲಿ ಹಾಲ್‍ನಲ್ಲಿ ನಡೆದ ರೈತರ ಮಾಸಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭತ್ತ, ಅಡಕೆ, ತೆಂಗು, ಹೊಗೆಸೊಪ್ಪು ಸೇರಿದಂತೆ ಇನ್ನಿತರ ಬೆಳೆಗಳಿಗೆ ಉಚಿತ ವಿದ್ಯುತ್ ನೀಡುತ್ತಾರೆ. ಆದರೆ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರಿಗೆ ಈ ಸೌಲಭ್ಯವಿಲ್ಲ ಎಂದು ವಿಷಾಧಿಸಿದರು.
ರೈತ ಸಂಘದ ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ 10ಎಚ್.ಪಿ.ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ ಅವರು ವಿಧಾನಸಭೆ ಅಧಿವೇಶನದಲ್ಲಿ ಘೋಷಣೆ ಮಾಡಿದ್ದರು. ಅದನ್ನು ರೈತ ಸಂಘ ಸ್ವಾಗತ ಮಾಡಿತ್ತು. ಆದರೆ ನಂತರ ತಂದ ಸಬ್ಸಿಡಿ ನಿಯಮವನ್ನು ಸಂಘ ಒಪ್ಪಲಿಲ್ಲ. ನಮಗೆ ಎಲ್ಲಾ ಬೆಳೆಗಳಂತೆ ಉಚಿತ ವಿದ್ಯುತ್ ನೀಡಬೇಕು ಎಂಬ ಬೇಡಿಕೆಯಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು ರೈತ ಸಂಘದ ಬೇಡಿಕೆಯನ್ನು ಈಡೇರಿಸುವ ನಂಬಿಕೆ ಇದೆ. ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ಕಳೆದ ಒಂದು ದಶಕದಿಂದ ಕಾಫಿ ಬೆಳೆಗಾರರು ನಷ್ಟದ ಹಾದಿಯಲ್ಲಿದ್ದಾರೆ. ಈ ವರ್ಷ ಮಳೆ ಕೈಕೊಟ್ಟಿದೆ. ಕಾಫಿ ಫಸಲು ಉದುರುತ್ತಿದೆ. ಕಾಳುಮೆಣಸು ಬಳ್ಳಿಗಳು ಒಣಗಿವೆ. ಸರ್ಕಾರ ರೈತರ ಬಗ್ಗೆ ಗಮನಹರಿಸಬೇಕು. ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಉಚಿತವಾಗಿ ಬಿತ್ತನೆ ಬೀಜ ನೀಡಬೇಕು. ರೈತರ ತೆರಿಗೆ ಹಣದಿಂದಲೇ ಸರ್ಕಾರ ನಡೆಯುತ್ತಿದೆ. ಆದ್ದರಿಂದ ರೈತರಿಗೆ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶಂಕರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್, ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಇದ್ದರು.







