
ವಿರಾಜಪೇಟೆ ಜೂ.28 NEWS DESK : ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮತ್ತು ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಅರಿವಿಕೆಯನ್ನು ನೀಡಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ವಕೀಲರಾದ ಅನುಪಮ ಕಿಶೋರ್ ವಕೀಲರು,ಕಾನೂನಿನ ಅರಿವು ಪ್ರತಿಯೊಬ್ಬ ಮಹಿಳೆಗೆ ಅತ್ಯಗತ್ಯ. ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಕಾನೂನಿನ ರಕ್ಷಣೆಯ ಬಗ್ಗೆ ತಿಳಿದಿದ್ದರೆ ಮಹಿಳೆಯರು ಆತ್ಮವಿಶ್ವಾಸದಿಂದ ಬದುಕಬಹುದು. ಗೃಹ ಹಿಂಸೆ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಕೆಲಸದ ಸ್ಥಳದಲ್ಲಿನ ಕಿರುಕುಳ ಮುಂತಾದ ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಕ್ರಮ ಕೈಗೊಳ್ಳಲು ಕಾನೂನಿನ ಅರಿವು ನೆರವಾಗುತ್ತದೆ. ಇದು ಮಹಿಳೆಯರ ಸಬಲೀಕರಣಕ್ಕೆ ಪ್ರಮುಖ ಅಡಿಪಾಯವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಅನ್ಯಾಯ, ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಧೈರ್ಯವಾಗಿ ನಿಲ್ಲಲು ಶಕ್ತಿ ನೀಡುತ್ತದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಕಾನೂನಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತದೆ. ಸಮಾಜದಲ್ಲಿ ನ್ಯಾಯ, ಶಾಂತಿ ಮತ್ತು ಸಮಾನತೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಅಪರಾಧಗಳನ್ನು ತಡೆಗಟ್ಟಲು ಮತ್ತು ಕಾನೂನನ್ನು ಗೌರವಿಸಲು ಪ್ರೇರೇಪಿಸುತ್ತದೆ. ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ ಕ್ಯಾಪ್ಟನ್ ಬಾಚುರ ಸಿ.ಪೂಣಚ್ಚ, ಪ್ರಾಂಶುಪಾಲರಾದ ಎಂ.ಕೆ.ಪದ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ.ಪಿ. ಗಾಯತ್ರಿ, ಡೈನ ಸೊಮಯ್ಯ ದಮಯಂತಿ, ದಿವ್ಯ, ಉಪನ್ಯಾಸಕ ವೃಂದದವರು, ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೀಕ್ಷಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಆಂಗ್ಲ ಉಪನ್ಯಾಸಕಿ ಎಂ.ಪಿ.ಡೈನ ಸೋಮಯ್ಯ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವೀಣಾ ಮತ್ತು ರಕ್ಷಿತಾ ನಿರೂಪಿಸಿದರು. ರಾಷ್ಟೀಯ ಸೇವಾ ಯೋಜನ ಘಟಕದ ಕಾರ್ಯಕ್ರಮಾಧಿಕಾರಿ ಅನುಪಮ ತಿಮ್ಮಯ್ಯ ವಂದಿಸಿದರು. ವಿದ್ಯಾರ್ಥಿಗಳಿಗೆ ಲಘು ಉಪಹಾರ ನೀಡಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.









