ನಾಪೋಕ್ಲು ಜೂ.22 : ವಿವಿಧ ಶಾಲಾ ಕಾಲೇಜುಗಳಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾವೇರಿ ಮಾತನಾಡಿ ಯೋಗಾಭ್ಯಾಸದಿಂದ ದೈಹಿಕ ಕ್ಷಮತೆಯನ್ನು ಪಡೆದುಕೊಳ್ಳಬಹುದು. ಪ್ರತಿದಿನ ಯೋಗ ಮಾಡುವುದರಿಂದ ಓದಿನ ಗಮನಕೊಡಲು ಸಾಧ್ಯ. ದೈಹಿಕ ಹಾಗೂ ಮಾನಸಿಕ ಸದೃಡತೆ ಹೊಂದಲು ಯೋಗ ಸಹಕಾರಿ ಎಂದರು.
ಈ ಸಂದರ್ಭ ಕಾಲೇಜಿನ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಯೋಗ ಮಾಡುವುದರ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಬೋಪಯ್ಯ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಪ್ರಾಂಶುಪಾಲರಾದ ಕಲ್ಯಾಟಂಡ ಶಾರದ ಅಪ್ಪಣ್ಣ, ಸಂಸ್ಥೆಯ ನಿರ್ದೇಶಕ ಪ್ರೊ.ಪೂಣಚ್ಚ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಶಿಕ್ಷಕಿ ಕೆ.ಎಸ್.ಶೋಭಿತ ಹಾಗೂ ಕೆ.ಕೆ.ಸರಿತಾ ಯೋಗ ಪ್ರದರ್ಶನದ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹೋಬಳಿ ವ್ಯಾಪ್ತಿಯ ಅಂಕೂರು ಪಬ್ಲಿಕ್ ಸ್ಕೂಲ್, ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಕೆಪಿಎಸ್ ಪ್ರಾರ್ಥಮಿಕ ಹಾಗೂ ಪ್ರೌಢಶಾಲೆ, ಕಕ್ಕಬೆ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬಲ್ಲಮಾವಟಿ ಗ್ರಾಮದ ಆರೋಗ್ಯ ಕ್ಷೇಮ ಕೇಂದ್ರ, ಜಿಲ್ಲಾ ಆಯುಷ್ ಇಲಾಖೆ ಹಾಗೂ ನೇತಾಜಿ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಎರೆಯುರುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಮಾತನಾಡಿ, ಯೋಗದ ಪ್ರಾಮುಖ್ಯತೆಯನ್ನು ಅರಿತ ಜನ ತಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಅಭ್ಯಾಸ ಮಾಡಲು ಮುಂದಾಗಿದ್ದಾರೆ. ಯೋಗದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ದೇಹ ಮತ್ತು ಪ್ರಕೃತಿಯ ನಡುವೆ ಸಂಪೂರ್ಣ ಸಾಮರಸ್ಯ ಬೆಸೆಯುತ್ತದೆ ಎಂದರು.
ಗ್ರಾ.ಪಂ ಅಧ್ಯಕ್ಷ ಮುಕ್ಕಾಟಿತರ ಸುತನ್ ಸುಬ್ಬಯ್ಯ ಮಾತನಾಡಿ, ಯೋಗ ಮಾಡುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ. ಏಕಾಗ್ರತೆ ಬೆಳೆಸಲು ಯೋಗ ಸಹಕಾರಿ ಎಂದರು. ಬಲ್ಲಮಾವಟಿ ಆಯುಷ್ ಕೇಂದ್ರದ ಡಾ.ಶುಭ ಪ್ರಸ್ತಾವಿಕವಾಗಿ ಮಾತನಾಡಿ, ಯೋಗ ಮಾಡುವುದರ ಮೂಲಕ ಶಿಸ್ತುಬದ್ಧ ಬದುಕನ್ನು ನಡೆಸಲು ಸಾಧ್ಯ. ಭಾರತೀಯ ಪರಂಪರೆಯಲ್ಲಿ ಯೋಗಾಭ್ಯಾಸಕ್ಕೆ ಮಹತ್ತರ ಸ್ಥಾನವಿದೆ. ಜೂನ್ 21 ವರ್ಷದಲ್ಲಿ ಅತ್ಯಂತ ಹೆಚ್ಚು ಹಗಲುಳ್ಳ ದಿನವಾಗಿದ್ದು ಆ ದಿನವನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ಬಾಳೆಯಡ ದೀನಾ ಮಾಯಮ್ಮ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶರತ್ ಪೂಣಚ್ಚ ಉಪಸ್ಥಿತರಿದ್ದರು.
ವಿವಿಧ ಶಾಲಾ-ಕಾಲೇಜುಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕ ವೃಂದ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








