ಮಡಿಕೇರಿ ಜೂ.22 : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಹೊದ್ದೂರು ಗ್ರಾ.ಪಂ ಮತ್ತು ವಾಟೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಟೆಕಾಡು ಸಹಯೋಗದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಾಟೆಕಾಡು ಹೊದ್ದೂರು ಗ್ರಾ.ಪಂ ಕಟ್ಟಡದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವಿವಿಧ ಭಂಗಿಯ ಯೋಗಗಳನ್ನು ಅಭ್ಯಾಸಿಸಲಾಯಿತು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಮಾತನಾಡಿ, ಯೋಗವು ಮನಸ್ಯನ ಆರೋಗ್ಯ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಡುಲು ಉತ್ತಮ ಸಾಧನವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಯೋಗ ಅಭ್ಯಾಸ ಮಾಡಿದರೆ ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಯೋಗ ತರಬೇತುದಾರೆ ಅರ್ಜುನ ಪ್ರಶಸ್ತಿ ವಿಜೇತ ಪಿ. ಹೆಚ್. ಅಲೀಮಾ ಮಾತನಾಡಿ, ಯೋಗದಲ್ಲಿ ಹದಿನೆಂಟು ಸಾವಿರ ಆಸನಗಳಿದ್ದು, ಅದರಲ್ಲಿ ಸುಮಾರು ನೂರು ಆಸನಗಳನ್ನು ಕಲಿತಿರುವ ನನಗೆ ಅರ್ಜುನ ಪ್ರಶಸ್ತಿ ಲಭಿಸಿದೆ. ಹಾಗಾಗಿ ಮಕ್ಕಳು ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ಮಕ್ಕಳನ್ನು ಹುರಿದುಂಬಿಸಿದರು.
ನಂತರ ಮಕ್ಕಳಿಗೆ ಕೆಲವು ಆಸನಗಳನ್ನು ಅಭ್ಯಾಸಿಸುವ ಮೂಲಕ ವಿಶ್ವ ಯೋಗ ದಿನಕ್ಕೆ ಮೆರುಗು ಹೆಚ್ಚಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಸಂಘಟಕರಾದ ಯು.ಸಿ. ದಮಯಂತಿ, ಕಾರ್ಯದರ್ಶಿ ಎಂ. ಎಂ. ವಸಂತಿ, ಸಹ ಕಾರ್ಯದರ್ಶಿ ಬೊಳ್ಳಜಿರ. ಬಿ. ಅಯ್ಯಪ್ಪ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಅಜ್ಜಮಕ್ಕಡ ವಿನುಕುಮಾರ್, ಗ್ರಾ.ಪಂ ಕಾರ್ಯದರ್ಶಿ ಚಂದ್ರಶೇಖರ, ಸದಸ್ಯರಾದ ಅನಿತ ಅಪ್ಪಣ್ಣ, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು. ವಾಟೆಕಾಡು ಹೊದ್ದೂರಿನ ಸ.ಹಿ.ಪ್ರಾ. ಶಾಲೆ ಶಿಕ್ಷಕರಾದ ಕುಮಾರ ಸ್ವಾಮಿ ನಿರೂಪಣೆ ಮಾಡಿ, ವಂದಿಸಿದರು.










