ಮಡಿಕೇರಿ ಜೂ.27 : ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜ್ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅರಕಲಗೋಡು ಜೆಡಿಎಸ್ ಶಾಸಕ ಎ.ಮಂಜು ಅವರು ಪಾಲ್ಗೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾದರು. ಪುತ್ರ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಕಾರ್ಯವೈಖರಿಯನ್ನು ವೀಕ್ಷಿಸುವ ಕುತೂಹಲದಿಂದ ಮಂಜು ಉಪಸ್ಥಿತರಿದ್ದರೇ ಎನ್ನುವ ಸಂಶಯವನ್ನು ಹುಟ್ಟು ಹಾಕಿದರು.
ಕರ್ನಾಟಕ ರಾಜ್ಯ ಕೃಷಿ ಸಹಕಾರ ಮಂಡಲದ (ಎಸ್ಎಲ್ಡಿಪಿ) ನಿರ್ದೇಶಕನಾಗಿ ನನಗೆ ಕೊಡಗು, ಹಾಸನ ಉಸ್ತುವಾರಿ ಇದೆ, ನನಗೆ ಸಭೆಗೆ ಆಹ್ವಾನ ಇದೆ. ಹಾಗಾಗಿ ನಾನೂ ಕೂಡ ಕೆಡಿಪಿ ಸಭೆಗೆ ಬಂದಿದ್ದೇನೆ. ಜೊತೆಗೆ ಮಗ ನಡೆಸುವ ಸಭೆ ನೋಡಿ ಖುಷಿ ಆಗಿದೆ, ಅದಕ್ಕೆ ಅಧಿಕಾರಿಗಳ ಸಾಲಲ್ಲಿ ಕುಳಿತು ಸಭೆಯಲ್ಲಿ ಭಾಗಿಯಾದೆ. ಜೊತೆಗೆ ಮಗ ನಡೆಸುವ ಸಭೆ ನೋಡಿ ಖುಷಿ ಆಗಿದೆ, ಅದಕ್ಕೆ ಅಧಿಕಾರಿಗಳ ಸಾಲಲ್ಲಿ ಕುಳಿತು ಸಭೆಯಲ್ಲಿ ಭಾಗಿಯಾದೆ ಎಂದು ಕೆಡಿಪಿ ಸಭೆಯಲ್ಲಿ ಭಾಗಿಯಾದ ನಂತರ ಸುದ್ದಿಗಾರರ ಬಳಿ ಸ್ಪಷ್ಟನೆ ನೀಡಿದರು.
::: ಕಾಂಗ್ರೆಸ್ ನುಡಿದಂತೆ ನಡೆಯಲಿ :::
ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ಯಾರಂಟಿಗಳ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಂಜು, ಟ್ವೀಟ್ ಮಾಡಿರೋದು ಸರಿಯಾಗಿಯೇ ಇದೆ, ಬಿಜೆಪಿಯವರು ಸರಿಯಿಲ್ಲ ಎಂದು ಕಾಂಗ್ರೆಸ್ಗೆ ರಾಜ್ಯದ ಜನ ಓಟು ಹಾಕಿದರು. ಬಿಜೆಪಿ ಬಗ್ಗೆ 5 ವರ್ಷದ ಬಳಿಕ ಗೊತ್ತಾಯ್ತು, ಕಾಂಗ್ರೆಸ್ ಏನೆಂದು 1 ತಿಂಗಳಿಗೆ ಜನರಿಗೆ ಗೊತ್ತಾಗಿದೆ ಎಂದು ಕುಹಕವಾಡಿದರು.
ಸೌಕರ್ಯ ಕೊಡ್ತೀವಿ ಅಂತ ಗೆದ್ದಿದೀರ, ಜನರನ್ನು ಸೌಕರ್ಯ ವಂಚಿತರನ್ನಾಗಿ ಮಾಡಬೇಡಿ, ನುಡಿದಂತೆ ನಡೆಯಿರಿ. ಅಕ್ಕಿ ವಿಚಾರದಲ್ಲಿ ಕೇಂದ್ರದ ಪಾಲೇನು ಮತ್ತು ರಾಜ್ಯದ ಪಾಲೇನು ಅನ್ನೋದು ಈಗ ಗೊತ್ತಾಗಿದೆ. ಕೇಂದ್ರದ ಪಾಲನ್ನು ಇವರು ನಮ್ಮದು ಎನ್ನೋಕ್ಕಾಗಲ್ಲ, ಅವರಿಗೆ ಕರ್ನಾಟಕ ಒಂದಲ್ಲ, ಇಡೀ ದೇಶ ಇದೆ. ಚುನಾವಣೆ ವೇಳೆ ನೀವು 10 ಕೆಜಿ ಕೊಡ್ತೀವಿ ಅಂದಿದ್ರಿ, ಹಾಗಾಗಿ ಆ 10 ಕೆಜಿಯನ್ನು ಹೇಗಾದ್ರೂ ಕೊಡಿ, ಸಾಲವಾದರೂ ಮಾಡಿ, ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರ ಮಾತು ಉಳಿಸಿಕೊಳ್ಳಬೇಕು ಎಂದರು.