ನಾಪೋಕ್ಲು, NEWS DESK ಅ. 28: ಪವಿತ್ರ ಕಾವೇರಿ ತೀರ್ಥೋದ್ಭವದ ನಂತರ ತುಲಾ ಮಾಸದ ಹತ್ತನೇ ದಿನ ಆಚರಿಸಲಾಗುವ ಪ್ರಸಿದ್ಧ ‘ಪತ್ತಾಲೋಧಿ’ ಆರಾಧನೋತ್ಸವವು ಇಲ್ಲಿಗೆ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.
ಪರದಂಡ ಕುಟುಂಬಸ್ಥರ ನೇತೃತ್ವದಲ್ಲಿ ಆಚರಿಸಿಕೊಂಡು ಬರುತ್ತಿರುವ ಈ ವಿಶೇಷ ಆರಾಧನೋತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಉತ್ಸವದ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ತುಲಾಭಾರ ಸೇವೆಗಳನ್ನು ಸಲ್ಲಿಸಿದರು. ಬಳಿಕ ತೀರ್ಥಪ್ರಸಾದ ಸ್ವೀಕರಿಸಿ ಧನ್ಯರಾದರು. ಈ ಸಂದರ್ಭದಲ್ಲಿ ದೇವರ ನೃತ್ಯಬಲಿ ಹಾಗೂ ಅನ್ನಪ್ರಸಾದ ವಿತರಣೆ ನಡೆಯಿತು. ಅರ್ಚಕ ಜಗದೀಶ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಕಕ್ಕಬ್ಬೆಯ ಪಾಡಿ ದೇವಾಲಯವಲ್ಲದೆ, ಪೇರೂರು ಹಾಗೂ ನೆಲಜಿ ಗ್ರಾಮಗಳ ಶ್ರೀ ಇಗ್ಗುತಪ್ಪ ದೇವಾಲಯಗಳಲ್ಲಿಯೂ ಪತ್ತಾಲೋಧಿ ಉತ್ಸವವು ಸಂಭ್ರಮದಿಂದ ನೆರವೇರಿತು.
ದೇವಾಲಯದ ದೇವತಕ್ಕರೂ, ಭಕ್ತಜನ ಸಂಘದ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ದೇವರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿ, “ಪತ್ತಾಲೋಧಿ ದಿನವು ಇಗ್ಗುತಪ್ಪ ದೇವರ ಆರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರವಾದ ದಿನವಾಗಿದೆ. ನಾಡಿನ ಎಲ್ಲಾ ಭಕ್ತರಿಗೂ ದೇವರು ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಕ್ಷೇಮಾಭಿವೃದ್ಧಿಯನ್ನು ಕರುಣಿಸಲಿ” ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ವ್ಯವಸ್ಥಾಪನ ಸಮಿತಿ ಹಾಗೂ ಭಕ್ತಜನ ಸಂಘದ ಸದಸ್ಯರು, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಸಿಬ್ಬಂದಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

















