ನಾಪೋಕ್ಲು ಜೂ.30 : ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಮೂರ್ನಾಡು ಪೊಲೀಸ್ ಠಾಣಾ ಸಿಬ್ಬಂದಿ ಹನುಮಂತಪ್ಪ ಮಾತನಾಡಿ, ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಹದಿಹರೆಯದ ವಯಸ್ಸಿನವರು ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ವಿದ್ಯಾರ್ಜನೆ ಮಾಡಿ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ದೇವಕಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಾಣಿ ಶ್ರೀ, ಮೂರ್ನಾಡು ಪೊಲೀಸ್ ಠಾಣಾ ಎಎಸ್ಐ ಅನಿಲ್ ಕುಮಾರ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ದಿಲೀಪ್, ಮಂಜುನಾಥ್ ಆಗಮಿಸಿದರು.
ಈ ಸಂದರ್ಭ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ