ಮಡಿಕೇರಿ ಜೂ.30 : ‘ಕುಂಡಾಮೇಸ್ತ್ರಿ’ ಯೋಜನೆಯ ಮೂಲಕ ಮಡಿಕೇರಿಗೆ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ಒಂದು ವರ್ಷಗಳ ಕಾಲ ಕರ್ನಾಟಕ ರಾಜ್ಯ ನೀರು ಸರಬರಾಜು ಮಂಡಳಿ(ಕೆಯುಡಬ್ಲುಎಸ್)ಗೆ ವಹಿಸಿಕೊಡುವ ಮಹತ್ವದ ನಿರ್ಣಯವನ್ನು ನಗರಸಭಾ ಸಾಮಾನ್ಯ ಸಭೆಯಲ್ಲಿ ಕೈಗೊಂಡಿದೆ.
ಮಡಿಕೇರಿ ನಗರಸಭೆಯ ಸಭಾಂಗಣದಲ್ಲಿ ಚುನಾವಣಾ ನಂತರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಉಪಸ್ಥಿತಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತಲ್ಲದೆ, ಕೆಯುಡಬ್ಲ್ಯುಎಸ್‍ನ ಕುಡಿಯುವ ನೀರು ಸಂಪರ್ಕ ವ್ಯವಸ್ಥೆಯ 20 ಕೋಟಿ ವೆಚ್ಚದ ಯೋಜನೆಗೆ ಇದೇ ಸಂದರ್ಭ ಒಪ್ಪಿಗೆಯನ್ನು ನೀಡಲಾಯಿತು.
ನಗರಸಭೆಯ ಎಸ್‍ಡಿಪಿಐ ಸದಸ್ಯ ಮನ್ಸೂರ್ ಮಾತನಾಡಿ, ಕುಂಡಾಮೇಸ್ತ್ರಿ ಯೋಜನೆಯಡಿ ಎರಡು 300 ಹೆಚ್‍ಪಿ ಪಂಪ್‍ಗಳು ಹದಗೆಟ್ಟು , ಮಡಿಕೇರಿ ನಗರದ ನಿರು ಸರಬರಾಜು ವ್ಯವಸ್ಥೆ ಕೆಲ ದಿನಗಳ ಕಾಲ ಹದಗೆಟ್ಟಿತ್ತೆಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ಸದಸ್ಯ ಕೆ.ಎಸ್.ರಮೇಶ್ ಅವರು, ಕುಂಡಾ ಮೇಸ್ತ್ರಿ ಯೋಜನೆಯಡಿ ಕೂಟುಹೊಳೆಗೆ ನೀರು ಪಂಪ್ ಮಾಡುವ ಎರಡು ಮೋಟಾರುಗಳು ಹಾಳಾಗಿದ್ದರು, ಅದನ್ನು ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಹಗಲಿರುಳೆನ್ನದೆ ಶ್ರಮಿಸಿ ಸರಿಪಡಿಸಿದ್ದು, ಈ ನಡುವೆ ಒಂದೆರಡು ದಿನಗಳ ಕಾಲವಷ್ಟೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತೆಂದು ಸಮಜಾಯಿಷಿಕೆ ನೀಡಿದರಲ್ಲದೆ, ಮಡಿಕೇರಿ ನಗರಕ್ಕೆ ಅಗತ್ಯ ನೀರನ್ನು ಒದಗಿಸಿಕೊಡುವ ಕುಂಡಾಮೇಸ್ತ್ರಿ ಯೋಜನೆಯನ್ನು ಕ್ರಮ ಬದ್ಧವಾಗಿ ಇಂದಿಗೂ ಕೆಯುಡಬ್ಲ್ಯುಎಸ್ ಮಡಿಕೇರಿ ನಗರಸಭೆಗೆ ಹಸ್ತಾಂತರಿಸಿಲ್ಲವೆಂದು ಮಾಹಿತಿ ನೀಡಿದರು.
ಈ ಹಂತದಲ್ಲಿ ಕೆಯುಡಬ್ಲ್ಯುಸ್ ಅಧಿಕಾರಿ, ಇದಕ್ಕೆ ಕಾರಣವಾದ ಅಂಶಗಳನ್ನು ತಿಳಿಸಿದರಲ್ಲದೆ, ಕುಶಾಲನಗರದಲ್ಲಿ ಕೆಯುಡಬ್ಲ್ಯುಎಸ್‍ನಿಂದ ವ್ಯವಸ್ಥಿತವಾಗಿ ನಗರಕ್ಕೆ ನಿರು ಸರಬರಾಜು ಮಾಡಲಾಗುತ್ತಿದೆಯೆಂದು ತಿಳಿಸಿದರು. ಈ ಸಂದರ್ಭ ಸದಸ್ಯ ಮನ್ಸೂರ್ ಅವರು, ಕುಂಡಾ ಮೇಸ್ತ್ರಿ ಯೋಜನೆಯಡಿ ಅಗತ್ಯ ನೀರು ಇದ್ದರೂ ಮಡಿಕೇರಿಗೆ ಪ್ರತಿನಿತ್ಯ ಏತಕ್ಕಾಗಿ ವ್ಯವಸ್ಥಿತ ನೀರು ಸರಬರಾಜು ಸಾಧ್ಯವಾಗುತ್ತಿಲ್ಲವೆಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಮಧ್ಯ ಪ್ರವೇಶಿಸಿದ ಶಾಸಕ ಡಾ.ಮಂಥರ್ ಗೌಡ ಅವರು, ಕುಂಡಾಮೇಸ್ತ್ರಿ ಯೋಜನೆಯಿಂದ ಮಡಿಕೇರಿ ನಗರಕ್ಕೆ ಒಂದು ವರ್ಷಗಳ ಕಾಲ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ಕೆಯುಡಬ್ಲ್ಯುಎಸ್‍ಗೆ ವಹಿಸಿಕೊಡಬೇಕೆಂದು ತಿಳಿಸಿದರು. ಇದಕ್ಕೆ ನಗರಸಭಾ ಸದಸ್ಯರು ಧ್ವನಿಗೂಡಿಸಿದ ಹಿನ್ನೆಲೆ, ವಿಷಯವನ್ನು ನಿರ್ಣಯ ಮಾಡಿ ಮಂಡಳಿಗೆ ಕಳುಹಿಸಿಕೊಡಲು ನಿರ್ಧರಿಸಲಾಯಿತು.
::: 54 ಕಿ.ಮೀ. ಪೈಪ್ ಲೈನ್ ಅಳವಡಿಕೆ :::
ಕೆಯುಡಬ್ಲ್ಯುಎಸ್ ಅಧಿಕಾರಿ, ಇಲಾಖೆಯ ಯೋಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಿ, 1 ಲಕ್ಷ ಜನಸಂಖ್ಯೆಯೊಳಗೆ ಒಳಪಟ್ಟ ರಾಜ್ಯದ ನಾಲ್ಕು ಪಟ್ಟಣಗಳನ್ನು ಇಲಾಖೆ ನೀರು ಸರಬರಾಜು ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ನಿರ್ಮಿಸಲು ಆಯ್ಕೆ ಮಾಡಿದ್ದು, ಅದರಲ್ಲಿ ಒಂದು ಮಡಿಕೇರಿ. ಅದರಂತೆ ಮಡಿಕೇರಿಯಲ್ಲಿ ಲಭ್ಯವಿರುವ ನೀರಿನ ಮೂಲಗಳನ್ನು ಬಳಸಿ, ನಗರವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿಕೊಂಡು 56.39 ಕೋಟಿಯ ನೂತನ ಪೈಪ್ ಲೈನ್ ಅಳವಡಿಕೆಯ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮೊದಲನೇ ವಿಭಾಗದಲ್ಲಿ 54 ಕಿ.ಮೀ. ಪೈಪ್ ಲೈನ್ ಬರುತ್ತದೆ. ಇದಕ್ಕಾಗಿ 20 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಇದಕ್ಕೆ ನಗರಸಭೆ ತನ್ನ ಒಪ್ಪಿಗೆಯನ್ನು ನೀಡಬೇಕೆಂದು ಕೋರಿದರು.
ಕೆಯುಡಬ್ಲ್ಯುಎಸ್‍ನ ಯೋಜನೆಯ ಮೊದಲನೇ ವಿಭಾಗದ ಡೈರಿ ಫಾರಂ, ಸುಬ್ರಹ್ಮಣ್ಯ ನಗರ ಮೊದಲಾದ ಬಡಾವಣೆಗಳನ್ನು ಹೊಂದಿದೆ. ಹಳೆಯ ಪೈಪ್ ಲೈನ್‍ಗಳಿಗೆ ಬದಲಾಗಿ ಹೊಸ ಪೈಪ್ ಲೈನ್‍ಗಳನ್ನು ಅಳವಡಿಸಲಾಗುತ್ತದೆ ಮತ್ತು ಈ ಸಂದರ್ಭ ರಸ್ತೆ ನಡುವೆ ಪೈಪ್ ಲೈನ್ ಹಾದು ಹೋದಲ್ಲಿ ಯೋಜನೆಯಡಿಯೇ ಅದನ್ನು ಸರಿಪಡಿಸಲಾಗುತ್ತದೆಂದು ಮಾಹಿತಿ ಒದಗಿಸಿದರು. ಈ ಯೋಜನೆಗೆ ಸಭೆ ತನ್ನ ಒಪ್ಪಿಗೆಯನ್ನು ಸೂಚಿಸಿತು.
ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ್ ಹಾಗೂ ನಗರಸಭಾ ಸದಸ್ಯರುಗಳು ಉಪಸ್ಥಿತರಿದ್ದರು.
Breaking News
- *ಡಾ.ಸೂರ್ಯ ಕುಮಾರ್ ಅವರ “ಮಂಗಳಿ” ಪುಸ್ತಕ ಬಿಡುಗಡೆ*
- *ಸಿದ್ದಾಪುರದಲ್ಲಿ ನೃತ್ಯ ಸಂಭ್ರಮ : ಗಮನ ಸೆಳೆದ ನೃತ್ಯ ವೈಭವ*
- *ಎಸ್.ಕೆ.ಎಸ್.ಎಸ್.ಎಫ್ ವಿರಾಜಪೇಟೆ ವಲಯ ಇಸ್ಲಾಮಿಕ್ ಕಲೋತ್ಸವ : ವಿರಾಜಪೇಟೆ ಯೂನಿಟ್ ಚಾಂಪಿಯನ್*
- *ಸುಂಟಿಕೊಪ್ಪ : ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ*
- *ಕಣಿವೆಯಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ*
- *ಪೆನ್ಷನ್ಲೇನ್ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ*
- *ಬ್ರಹ್ಮಗಿರಿ ಸಹೋದಯ ಅಥ್ಲೆಟಿಕ್ಸ್ : ಕೊಡಗು ವಿದ್ಯಾಲಯಕ್ಕೆ ಚಾಂಪಿಯನ್ ಪಟ್ಟ*
- *ಕನಕದಾಸರಿಗೆ ಗೌರವ ಅರ್ಪಿಸಿದ ಸಿಎಂ*
- *ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಮಡಿಕೇರಿ : ಕನ್ನಡ ಅನ್ನದ ಭಾಷೆಯಾಗಬೇಕು : ವೆಂಕಟೇಶ ಪ್ರಸನ್ನ*