ಮಡಿಕೇರಿ ಜು.1 : ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸರಕಾರದ ಮೂಲಕ ರಾಜ್ಯದ ಹಲವು ವೈದ್ಯರಿಗೆ ಶ್ರೇಷ್ಠ ವೈದ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆಯಾಗಿರುವ ಮುಕ್ಕಾಟಿರ ಡಾ.ಗ್ರೀಷ್ಮ ಬೋಜಮ್ಮ ಅವರಿಗೂ ಈ ಪ್ರಶಸ್ತಿ ಲಭ್ಯವಾಗಿದೆ.
ಉತ್ತಮ ಪ್ರಸೂತಿ ತಜ್ಞೆ ಎಂದು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದರು.
ಡಾ.ಗ್ರೀಷ್ಮಾ ಬೋಜಮ್ಮ ಅವರು ಕಳೆದ 2007ರಿಂದ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಶ್ರೀಮಂಗಲ ಪ.ಪೂ ಕಾಲೇಜಿನ ಮಾಜಿ ಪ್ರಾಂಶುಪಲರಾದ ಕಟ್ಟೇರ ಎನ್.ಮೇದಪ್ಪ ಹಾಗೂ ಶಿಕ್ಷಕಿ ದಿವಂಗತ ಉಷಾಬಾಯಿ ಅವರ ಪುತ್ರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಮೂಳೆ ತಜ್ಞ ಮುಕ್ಕಾಟಿರ ಡಾ.ಸಂಜಯ್ ಪೊನ್ನಪ್ಪ ಅವರ ಪತ್ನಿ.









