ವಿರಾಜಪೇಟೆ ಜು.3 : ಸರಕಾರದ ಯೋಜನೆಗಳನ್ನು ಗ್ರಾಮಸ್ಥರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು, ಆಗ ಮಾತ್ರ ಯೋಜನೆಯ ಉದ್ದೇಶ ನೆರವೇರಲು ಸಾಧ್ಯವಾಗುತ್ತದೆ ಎಂದು ಆರ್ಜಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಣಿ ಹೇಳಿದರು.
ವಿರಾಜಪೇಟೆ ಬಳಿಯ ಆರ್ಜಿ ಗ್ರಾ.ಪಂ ವ್ಯಾಪ್ತಿಯ ಪೆರುಂಬಾಡಿ ಮತ್ತು ಆರ್ಜಿ ಗ್ರಾಮಸ್ಥರಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆಯ ಬಗ್ಗೆ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿ ಸ್ವಚ್ಚತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಇದು ಗಾಂಧಿಜೀ ಅವರ ಕನಸಾಗಿತ್ತು ಎಂದ ಮಣಿ ಅವರು ಮೊದಲು ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಈಗ ಪಂಚಾಯಿತಿ ಸಮಿತಿಯನ್ನು ರಚನೆ ಮಾಡಿದ ನಂತರ ನೀರಿನ ಸಮಸ್ಯೆ ಇಲ್ಲ. ನೀರಿನ ಬಗ್ಗೆ ಸಾರ್ವಜನಿಕರಲ್ಲಿ ಪ್ರಮಾಣಿಕತೆ ಇರಬೇಕು. ನಾವುಗಳು ಅಂತರ್ಜಲ ನೀರನ್ನು ಉಳಿಸುವ ಮೂಲಕ ಪ್ರಕೃತಿಯನ್ನು ಉಳಿಸಿ ಬೆಳಸಬೇಕು. ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೋಬ್ಬರು ಕಡಿಮೆ ಮಾಡಬೇಕೆಂದು ಸಭೆಗೆ ತಿಳಿಸಿದರು.
ಸಭೆಯಲ್ಲಿದ್ದ ಪೆರುಂಬಾಡಿ ಗ್ರಾಮದ ಬಿ.ಆರ್.ಅನೀಲ್ ಕುಮರ್[ಹರೀಶ್] ಮಾತನಾಡಿ, ವಿರಾಜಪೇಟೆ ಪುರಸಭೆಯವರು ಟ್ಯಾಕ್ಟರ್‍ನಲ್ಲಿ ಪಟ್ಟಣದ ಕಸವನ್ನು ಮತ್ತು ಹಸಿಮೀನು, ಕೋಳಿ ತ್ಯಾಜ್ಯಗಳನ್ನು ತಂದು ಪೆರಂಬಾಡಿ ತೆರ್ಮೆಕಾಡು ಪೈಸಾರಿಯಲ್ಲಿ ಹಾಕುತ್ತಾರೆ. ಇದರಿಂದ ಕಸದ ಮೇಲೆ ಕುಳಿತ ನೊಣಗಳು ಆಹಾರದಲ್ಲಿ ಕುಳಿತುಕೊಳ್ಳುವುದರಿಂದ ರೋಗ ರುಜಿನಗಳು ಹರಡುವುದುಂಟು, ಹಲವು ಭಾರಿ ಪುರಸಭೆ ಮುಖ್ಯಾಧಿಕಾರಿಗೆ ಈ ಸಂಭಂದ ದೂರು ನೀಡಿದ್ದರೂ ಗಮನ ಹರಿಸಿಲ್ಲ ಇದರ ಬಗ್ಗೆ ಗ್ರಾ.ಪಂ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಿದಾಗ ಸ್ಥಳಿಯ ಶಾಸಕರು ಮತ್ತು ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಗ್ರಾಮಸ್ಥರು ತಿಳಿಸಿ ನಂತರ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಸಭೆಯ ಅದ್ಯಕ್ಷತೆಯನ್ನು ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಟಿ.ಜೋಸೆಫ್ ವಹಿಸಿ ಮಾತನಾಡಿದರು.
ಗ್ರಾ.ಪಂಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಮಾತನಾಡಿ, ಪಂಚಾಯಿತಿ ವತಿಯಿಂದ ನೀರಿನ ಸಮಸ್ಯೆಯಾಗದಂತೆ ಗ್ರಾಮದ ಜನರಿಗೆ ಕುಡಿಯುವ ನೀರು ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ಈ ಸಂದರ್ಭ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕ್ರಮ ಕೈಗೊಳ್ಳುವಂತೆ ಹಾಗೂ ಇಂದಿರ ನಗರದಲ್ಲಿ ನೀರಿನ ಟ್ಯಾಂಕ್ ಆಗಿದ್ದು ಸುಮಾರು 40 ಮನೆಗಳಿಗೆ ಪೈಪ್ ಅಳವಡಿಸಿ ನೀರಿನ ಸೌಲಭ್ಯ ನೀಡುವಂತೆ ಅಲ್ಲಿನ ನಿವಾಸಿಗಳು ಹೇಳಿದಾಗ ಮುಂದಿನ ದಿನದಲ್ಲಿ ನೀಡುವುದಾಗಿ ಪಿಡಿಒ ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ಕೆ.ಬೋಪಣ್ಣ, ಪಿ.ಹೆಚ್. ಸುನಿತಾ, ಗ್ರಾಮದ ಕೆ. ವಾಸು ಕಾಳಪ್ಪ, ವಿತನ್ ಬಿದ್ದಯ್ಯ, ಕೆ. ಪ್ರದೀಫ್ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಸಂಜೀವಿನಿ ಒಕ್ಕೂಟದ ದಿವ್ಯ, ಅಂಗನವಾಡಿ ಮತ್ತು ಆಶಾ ಕರ್ಯಕರ್ತರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.