ಮಡಿಕೇರಿ ಜು.3 : ಭಾರತೀಯ ಸೇನೆಯ ಅವಿಭಾಜ್ಯ ಭಾಗವಾಗಿರುವ ಭಾರತೀಯ ವಾಯು ಸೇನೆಯು (ಐಎಎಫ್) ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ವಾಯು ಸೇನೆಯ ಪ್ರಥಮ ಕರ್ತವ್ಯ ದೇಶದ ಮೈಮಾನಿಕ ವಲಯದ ರಕ್ಷಣೆಯಾಗಿದ್ದು, ಯುದ್ಧದಂತಹ ತುರ್ತು ಕಾಲಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಇನ್ನು ನೈಸರ್ಗಿಕ ವಿಕೋಪವುಂಟಾದಲೂ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಲಿದೆ ಎಂದು ಭಾರತೀಯ ವಾಯುಸೇನೆಯ ಫ್ಲೈಟ್ ಲೆಫ್ಟಿನೆಂಟ್ ಗೌರವ ಶರ್ಮ ತಿಳಿಸಿದರು.
ಭಾರತೀಯ ವಾಯುಸೇನೆಯ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಡಗು ಜಿಲ್ಲೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ( ಎನ್.ಎಸ್.ಎಸ್.) ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಾಲೆಯ ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಭಾರತೀಯ ವಾಯು ಸೇನೆಯ ವತಿಯಿಂದ ವಾಯುಸೇನೆಯ ಬಸ್‍ನಲ್ಲಿ ಅಳವಡಿಸಿರುವ ಸೇನೆಯ ಕುರಿತು ಏರ್ಪಡಿಸಿದ್ದ ವಿಡಿಯೋ- ಚಿತ್ರಗಳೊಂದಿಗೆ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ಭಾರತೀಯ ಸೇನೆ ಬಗ್ಗೆ ಹೆಚ್ಚಿನ ಜ್ಞಾನ ಗಳಿಸಿಕೊಂಡು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಸಂಕಲ್ಪ ತೊಡಬೇಕು ಎಂದರು.
ದೇಶದ ಯುವ ಶಕ್ತಿಯೇ ಸೇನೆಯ ಬಲ. ಹಾಗಾಗಿ, ಯುವಕರಿಗೆ ಭಾರತೀಯ ವಾಯು ಸೇನೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವ ಸಲುವಾಗಿ ವಾಯು ಸೇನೆಯ ಬಸ್ ಮೂಲಕ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ತೆರಳಿ ಭಾರತೀಯ ವಾಯುಸೇನೆಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲಾಗುತ್ತಿದೆ ಎಂದು ಗೌರವ್ ಶರ್ಮ ತಿಳಿಸಿದರು.
ಭಾರತೀಯ ವಾಯು ಪಡೆಯು ಆಧುನಿಕತೆಯೊಂದಿಗೆ ತನ್ನ ತಂತ್ರಜ್ಞಾನಗಳಲ್ಲೂ ಅಭಿವೃದ್ಧಿ ತಂದಿರುವ ಭಾರತೀಯ ವಾಯು ಪಡೆ ಈಗ ವಿಶ್ವದ ಮುಂಚೂಣಿಯ ಯುದ್ಧ ವಿಮಾನಗಳ ಒಡೆಯನಾಗಿದೆ ಎಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಎಸ್.ಸದಾಶಿವಯ್ಯ ಪಲ್ಲೇದ್ ಮಾತನಾಡಿ, ಯುವ ಜನಾಂಗದಲ್ಲಿ ವಾಯುಸೇನೆಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಸೇನೆಗೆ ಸೇರಲು ಇಂತಹ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಭಾರತೀಯ ವಾಯು ಸೇನೆ ಹಾಗೂ ರಾಷ್ಟ್ರದ ಸಾರ್ವಭೌಮತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಮ್ಮೆ ಮೂಡಿಸುವ ಉದ್ದೇಶದಿಂದ ಇಂತಹ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಭಾರತೀಯ ವಾಯುಪಡೆಯು ವಿಶ್ವದಲ್ಲೇ ಏಳನೇ ಶಕ್ತಿಶಾಲಿ ವಾಯುಸೇನೆಯಾಗಿದೆ.
ಭಾರತೀಯ ವಾಯು ಸೇನೆಯಲ್ಲಿರುವ ವಿವಿಧ ಘಟಕಗಳು, ಸೇನೆಗೆ ಸೇರಲು ಬೇಕಾದ ಅರ್ಹತೆ ಮತ್ತು ಪರೀಕ್ಷಾ ಕ್ರಮಗಳು, ಸೇನೆಯ ತರಬೇತಿ ಮತ್ತು ಸೇವೆ , ಸೇನೆಯಿಂದ ದೇಶದ ರಕ್ಷಣೆಗೆ ಆಗುವ ಉಪಯೋಗಗಳು ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಗೌರವ್ ಶರ್ಮ ವಿವರ ಮಾಹಿತಿ ನೀಡಿದರು.
ಶಿಕ್ಷಕಿ ಬಿ.ಎಸ್.ಅನ್ಸಿಲಾ ರೇಖಾ, ವಿದ್ಯಾರ್ಥಿಗಳಿಗೆ ಸೇನೆಯ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ನಾಗೇಶ್, ಉಪ ಪ್ರಾಂಶುಪಾಲ ಪರಮೇಶ್ವರಪ್ಪ , ವಾಯುಸೇನೆಯ ವಿವಿಧ ಹಂತದ ಅಧಿಕಾರಿಗಳು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಪ್ರದರ್ಶನದಲ್ಲಿ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿದಂತೆ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎನ್.ಎಸ್.ಎಸ್.ಘಟಕದ ವತಿಯಿಂದ ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿ ವಾಯುಸೇನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ರದರ್ಶನ : ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗಾಗಿ ವಾಯು ಸೇನಾ ಪಡೆಗಳು ಬಳಸುವ ಯುದ್ಧ ವಿಮಾನಗಳು ಹಾಗೂ ಅತ್ಯಾಧುನಿಕ ಅತ್ಯುನ್ನತ ಶಸ್ತ್ರಾಸ್ತ್ರಗಳನ್ನು ಒಳಗೊಂಡ ವಿಡಿಯೋ ಚಿತ್ರಗಳನ್ನು ಈ ಸಂದರ್ಭ ಪ್ರದರ್ಶಿಸಲಾಯಿತು.
ಭಾರತೀಯ ವಾಯುಸೇನೆಯ ಮಾಹಿತಿಯನ್ನೊಳಗೊಂಡ ಅತ್ಯಾಧುನಿಕ ಬಸ್ ವಿಶೇಷ ಪ್ರದರ್ಶನಗೊಳ್ಳುತ್ತಿರುವ ವೈವಿದ್ಯಮಯ ಸಲಕರಣೆಗಳು ನೋಡುಗರ ಗಮನ ಸೆಳೆದವು.