ನಾಪೋಕ್ಲು ಜು.3 : ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ನಿಸರ್ಗ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋಟ್ರಿ ಇಂಟ್ರಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಡಿಕೇರಿ ವಲಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರದಿನ ಹಾಗೂ ವನಮಹೋತ್ಸವವನ್ನು ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಲಯ ಆರ್‍ಎಫ್‍ಒ ರವೀಂದ್ರ, ನಮ್ಮ ಒಟ್ಟಾರೆ ಭೂಮಿಯಲ್ಲಿ ಕನಿಷ್ಠ ಪಕ್ಷ ಶೇ33ರಷ್ಟು ಅರಣ್ಯ ಇದ್ದರೆ ಮಾತ್ರ ನಮ್ಮ ನಾಗರೀಕತೆ,ಹಸಿರು ಹೊದಿಕೆ ಇರುತ್ತದೆ. ಇಲ್ಲವಾದರೆ ಯಾವುದು ಉತ್ತುಂಗಕ್ಕೆ ಹೆರಲು ಸಾಧ್ಯವಿಲ್ಲ, ಇವಾಗ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಶೇ.21ರಷ್ಟು ಮಾತ್ರ ಅರಣ್ಯ ಕಾಣಲು ಸಾಧ್ಯ ಎಂದರು.
ಶಾಲಾ ಕಾಲೇಜುಗಳಲ್ಲಿ ಮತ್ತು ನಮ್ಮ ಮನೆ, ಕಚೇರಿಗಳ ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲರೂ ಗಿಡ ನೆಟ್ಟು ಪರಿಸರವನ್ನು ಸಂರಕ್ಷಿಸಬೇಕಿದೆ ಎಂದರು.
ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾರಿಸ್ ಮಾತನಾಡಿ, ವನಮಹೋತ್ಸವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಕಾರ್ಯಕ್ರಮವನ್ನು ಮಾಡಬೇಕು. ನಮಗೆ ಬದುಕಲು ಪರಿಸರ ಎಷ್ಟು ಅನಿವಾರ್ಯ ಎಂಬುದನ್ನು ಅರಿತು ವಿದ್ಯಾರ್ಥಿಗಳು ಕಾರ್ಯಯೋನ್ಮುಖರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಳೇವಿದ್ಯಾರ್ಥಿ ಹಾಗೂ ದಾನಿಗಳಾದ ಕೇಟೋಳಿರ ರಾಜ ಗಣಪತಿ ಅವರು ವ್ಯಯಕ್ತಿಕವಾಗಿ ನೀಡಿದ 300ಕ್ಕೂ ಅಧಿಕ ವಿವಿಧ ತಳಿಯ ಗಿಡಗಳನ್ನು ಶಾಲೆಯ ಅವರಣದಲ್ಲಿ ನೆಡಲಾಯಿತು.
ಈ ಸಂದರ್ಭ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ವಿಜಿತ, ಪ್ರಭಾರ ಉಪ ಪ್ರಾಂಶುಪಾಲ ಎನ್. ಎಸ್. ಶಿವಣ್ಣ, ಅರಣ್ಯ ಇಲಾಖೆಯ ಡಿಆರ್‍ಎಫ್‍ಓ ಸುರೇಶ್, ಗಸ್ತು ಅರಣ್ಯಪಾಲಕ ಕಾಳೇಗೌಡ, ಸೋಮಣ್ಣ, ಮಂಜುನಾಥ್, ರಾಹುಲ್, ಕೇಶವಮೂರ್ತಿ, ಕಾರ್ತಿಕ್, ಬೆಳಗಾರರಾದ ಕುಂದ್ಯೋಳಂಡ ರಮೇಶ್ ಮುದ್ದಯ್ಯ, ಕಾಂಡಂಡ ಜೊಯಪ್ಪ, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಎಲ್ಲಾ ಉಪನ್ಯಾಸಕ ಮತ್ತು ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.
ವರದಿ : ಝಕರಿಯ ನಾಪೋಕ್ಲು