ಮಡಿಕೇರಿ ಜು.4 : ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಮುಂಬೈ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪದ ಗದ್ದೆಹಳ್ಳದ ಬಳಿ ನಡೆದಿದೆ.
ಅಂದೇರಿ ವೆಸ್ಟ್ ಮುಂಬೈನ್ ನ ನಿವಾಸಿ ಸೀಮಾ (50) ಮೃತ ದುರ್ದೈವಿಯಾಗಿದ್ದಾರೆ. ಇವರ ಪತಿ ಸುಧೀರ ಚಂದಾಲಿಯಾ (53) ಹಾಗೂ ಕಾರು ಚಾಲಕ ಉಡುಪಿ ಜಿಲ್ಲೆಯ ಕುಂಜಿಬೆಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ರಫೀಕ್ (28) ಗೆ ತೀವ್ರ ಗಾಯಗಳಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಡಿಕೇರಿ ಕಡೆಯಿಂದ ಸುಂಟಿಕೊಪ್ಪದ ರೆಸಾರ್ಟ್ ಗೆ ಆಗಮಿಸುತ್ತಿದ್ದ ಕಾರಿಗೆ ಕುಶಾಲನಗರ ಭಾಗದಿಂದ ಮಡಿಕೇರಿಯತ್ತ ತೆರಳುತ್ತಿದ್ದ ಲಾರಿ (ಎಪಿ-39 ಯುಬಿ-3679) ಡಿಕ್ಕಿಯಾಗಿದ್ದು, ಮಹಿಳೆ ಸ್ಥಳದಲ್ಲೆ ಮೃತಪಟ್ಟರು. ಘಟನೆ ಸಂದರ್ಭ ಬಾರ್ ಮತ್ತು ಸ್ಥಳದಲ್ಲಿ ನಿಲ್ಲಿಸಿದ್ದ ಕೆಲವು ಬೈಕ್ ಗಳಿಗೂ ಹಾನಿಯಾಗಿದೆ.
ಸುಧೀರ ಹಾಗೂ ಸೀಮಾ ದಂಪತಿ ತಮ್ಮ ಪುತ್ರನನ್ನು ಉಡುಪಿಯ ಕಾಲೇಜ್ ವೊಂದಕ್ಕೆ ದಾಖಲಿಸಿ ನಂತರ ಮೊಹಮ್ಮದ್ ರಫೀಕ್ ಎಂಬುವವರ ಕಾರಿನಲ್ಲಿ ಸುಂಟಿಕೊಪ್ಪಕ್ಕೆ ಆಗಮಿಸಿದ್ದರು. ರೆಸಾರ್ಟ್ ನಲ್ಲಿ ತಂಗಿ ಮಡಿಕೇರಿಯ ಪ್ರವಾಸಿತಾಣಗಳನ್ನು ವೀಕ್ಷಿಸಿ ಸುಂಟಿಕೊಪ್ಪಕ್ಕೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಅಪಘಾತ ನಡೆದ ನಂತರ ಆಂಧ್ರ ಮೂಲದ ಲಾರಿ ಚಾಲಕ ಶ್ರೀಧರ್ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಸುಂಟಿಕೊಪ್ಪ ಪೊಲೀಸರು ಚಾಲಕನ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.










