ಮಡಿಕೇರಿ ಜು.4 : ಮಹಿಳೆಯರು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಮತ್ತು ಸಾವಿತ್ರಿಬಾಯಿ ಪುಲೆ ಅವರ ಪಾತ್ರ ಅತಿ ಮುಖ್ಯ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ.ಸೌಮ್ಯ ಹೇಳಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದರು, ಸ್ವಾತಂತ್ರ್ಯ ನಂತರ ಅಂಬೇಡ್ಕರ್ ಅವರ ಸಂವಿಧಾನ ಮತ್ತು ಸಾವಿತ್ರಿಬಾಯಿ ಪುಲೆ ಶಿಕ್ಷಣ ನೀತಿಯಿಂದ ಮಹಿಳೆಯರು ಶಿಕ್ಷಣ ಪಡೆಯಲು ಮುಂದಾದರು, ಸಮಾಜದಲ್ಲಿ ಪುರುಷರೊಂದಿಗೆ ಉತ್ತಮ ಸ್ಥಾನಮಾನ ಪಡೆದು ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ದೇಶದ ಉನ್ನತ ಹುದ್ದೆಗಳನ್ನು ಪಡೆಯುತ್ತಿದ್ದಾರೆ ಎಂದು ನುಡಿದರು.
ಮಹಿಳೆ ಎಂದರೆ ಕೇವಲ ಮನೆಯ ಕೆಲಸಕ್ಕೆ ಸೀಮಿತವಾಗಿರದೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಹಾಗೂ ದೊಡ್ಡ ಗುರಿಯೊಂದಿಗೆ ಸಾಧನೆ ಮಾಡಿ ಪ್ರತಿಯೊಂದು ಕ್ಷೇತ್ರದಲ್ಲೂ ಸಹ ತಮ್ಮದೇ ಆದ ಕೊಡುಗೆಯನ್ನು ನೀಡಿ ತಂದೆ ತಾಯಿಗಳಿಗೆ ಗೌರವ ತಂದುಕೊಡುವಂತೆ ಡಾ.ಸೌಮ್ಯ ಹೇಳಿದರು.
ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ಕಾವೇರಿ ಅವರು ಮಾತನಾಡಿ ಗುಣ, ಗುರಿ, ಗುರು ಈ ಅಂಶಗಳು ಜೀವನದಲ್ಲಿ ಇದ್ದರೆ ಯಶಸ್ಸು ಸಾಧಿಸಬಹುದು, ಜೀವನದಲ್ಲಿ ಗುರಿ ಇಲ್ಲದಿದ್ದರೆ ಬದುಕು ಅಂತಿಮ ಗಟ್ಟ ತಲುಪುವುದು ಕಷ್ಟ ಸಾಧ್ಯ ಎಂದರು.
ಮಾನವ ಜೀವನ ದೊಡ್ಡದು ನಾವು ಅದನ್ನ ಸರಿಯಾಗಿ ಬಳಸಿಕೊಳ್ಳಬೇಕು. ನಾವು ಕಲಿತ ಶಾಲೆಗೆ ಒಳ್ಳೆಯ ಕೀರ್ತಿ, ಗೌರವ ತಂದುಕೊಡುತ್ತೇವೆ ಎಂದು ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಂವಿಧಾನದಿಂದ ಮಹಿಳೆಯರು ಶಾಲಾ, ಕಾಲೇಜು, ರಾಜಕೀಯ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಮಾನ ಅವಕಾಶ ಪಡೆಯುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಿಗೆ ಸ್ಪರ್ಧೆ ಒಡ್ಡುತ್ತಿದ್ದರೆ, ಹೆಚ್ಚಿನ ಶಿಕ್ಷಣ ಪಡೆದು ನಮ್ಮ ಶಾಲೆಗೆ ಉತ್ತಮ ಹೆಸರು ತಂದುಕೊಟ್ಟರೆ ನಮಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ..ಡಿ.ಜೆ. ಜವರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ವೃಂದದವರು, ಪೋ ಷಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು, ಮೌಲ್ಯ ಎಸ್. ಪ್ರಾರ್ಥಿಸಿ, ಶ್ರೀಜಾ ಸ್ವಾಗತಿಸಿದರು.









