ಮಡಿಕೇರಿ ಜು.6 : ಮಡಿಕೇರಿ, ಮದೆನಾಡು ಮತ್ತು ಕೊಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ ಭಾಗದ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗುವ ಸಾಧ್ಯತೆಗಳು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಹೆದ್ದಾರಿ ವಿಭಾಗದ ಅಧಿಕಾರಿಗಳು ಮದೆನಾಡು ಬಳಿ ರಸ್ತೆಯ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡಿದ್ದಾರೆ. ಹೆದ್ದಾರಿ ಬದಿ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಮಾಡಲಾಗಿದೆ. ಹೆದ್ದಾರಿಯ ಸುರಕ್ಷತೆಗಾಗಿ ಹಲವು ನಿರ್ವಹಣಾ ಕಾರ್ಯವನ್ನು ಹೆದ್ದಾರಿ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಕೈಗೊಳ್ಳಲಾಗಿದೆ ಎಂದು ಹೆದ್ದಾರಿ ವಿಭಾಗದ ಎಇಇ ನಾಗರಾಜು ತಿಳಿಸಿದ್ದಾರೆ.
ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಳೆದ ವರ್ಷವೂ ಮಳೆಹಾನಿಯಿಂದ ವಾಹನಗಳ ಸಂಚಾರಕ್ಕೆ ತೊಡಕ್ಕುಂಟಾಗಿತ್ತು.









