ಮಡಿಕೇರಿ, NEWS DESK ನ.19: ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನವೆಂಬರ್ 14 ಮತ್ತು 15ರಂದು ನಡೆದ 45ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2026ರಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಧಾರವಾಡ ವತಿಯಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯಿಂದ ಒಟ್ಟು 24 ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ಸಾಧನೆ ಮೆರೆದಿದ್ದಾರೆ.
ಪುರುಷರ ವಿಭಾಗದಲ್ಲಿ ಸಾಧನೆ
ಪುರುಷರ ವಿಭಾಗದಲ್ಲಿ ಬಲ್ಯಮೀದೆರಿರ ಪ್ರಕಾಶ್ (5 ಕಿ.ಮೀ. ನಡಿಗೆ), ಹೊಸೋಕ್ಲು ಚಿನ್ನಪ್ಪ (1500, 5000 ಹಾಗೂ 10,000 ಮೀ.), ಪಟ್ರಪಂಡ ಚಂಗಪ್ಪ (400 ಮೀ. ಹರ್ಡಲ್ಸ್), ಟಿ.ಹೆಚ್. ಗಣೇಶ್ ತೊರೆನೂರು (1500, 5000 ಹಾಗೂ 10,000 ಮೀ.), ಮೂಡಿಗೆರೆ ಪೊನ್ನಪ್ಪ (ಶಾಟ್ಪುಟ್), ಕ್ಯಾಚಮಾಡ ವಿಶು ತಮ್ಮಯ್ಯ (1500 ಮೀ.), ಅಮೆ ಜನಾರ್ದನ (800 ಮೀ.) ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ನಂದಿನೇರವಂಡ ಟೀಪು ಬಿದ್ದಪ್ಪ, ಸೂದನ ಡಾಲಿ, ಅಮೆ ಚಂದ್ರಪ್ರ, ಸಂತೋಷ್ ಬಿ.ಆರ್., ಕಾವೇರಿ ಮನೆ ಭರತ್ ಹಾಗೂ ಪಟ್ರಪಂಡ ಚಂಗಪ್ಪ ಸೇರಿದಂತೆ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ. ಕಟ್ಟೆಮನೆ ಹನಿ ಸೋಮಯ್ಯ ಹಾಗೂ ಕ್ಯಾಚಮಾಡ ವಿಶು ತಮ್ಮಯ್ಯ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಸಾಧನೆ
ಮಹಿಳೆಯರ ವಿಭಾಗದಲ್ಲಿ ಮುಲ್ಲೇರ ಪೊನ್ನಮ್ಮ ಪೂವಣ್ಣ ಅವರು ಶಾಟ್ಪುಟ್, ಡಿಸ್ಕಸ್ ಥ್ರೋ ಹಾಗೂ ಜಾವೆಲಿನ್ ಥ್ರೋನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಚೇಮಿರ ಸೀತಮ್ಮ ಅವರು ಶಾಟ್ಪುಟ್, ಡಿಸ್ಕಸ್ ಥ್ರೋ ಹಾಗೂ ಹ್ಯಾಮರ್ ಥ್ರೋನಲ್ಲಿ ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅರಮಾಣಮಾಡ ಮಮತಾ ಮನು ಅವರು ಜಾವೆಲಿನ್ ಥ್ರೋನಲ್ಲಿ ಚಿನ್ನ ಹಾಗೂ ಶಾಟ್ಪುಟ್ ಮತ್ತು ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಪ್ರಮೀಳಾ ಶೆಟ್ಟಿ ಅವರು 200 ಮೀ. ಓಟ ಹಾಗೂ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದರೆ, ಮುರೇರ ಶಾಂತಿ ಅವರು ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ 17 ಕ್ರೀಡಾಪಟುಗಳ ಆಯ್ಕೆ
ರಾಜ್ಯಮಟ್ಟದ ಚಾಂಪಿಯನ್ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೊಡಗಿನ 17 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಯು 2027ರ ಜನವರಿ ತಿಂಗಳಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿದೆ.
ಕೊಡಗು ಜಿಲ್ಲೆಯ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಸಾಧಿಸಿರುವ ಈ ಅಭೂತಪೂರ್ವ ಯಶಸ್ಸಿಗೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.
















