ಕುಶಾಲನಗರ ಜು.7 : ಅರಣ್ಯ ಬೆಳೆಸಲು ವನ ಮಹೋತ್ಸವ ಕಾರ್ಯಕ್ರಮ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಗಿಡ ನೆಡುವ ಕಾರ್ಯಕ್ಕೆ ಸಹಕರಿಸುವ ಮೂಲಕ ಹಸರು ಪರಿಸರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಹೇಳಿದರು.
ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವಿಭಾಗ ಮತ್ತು ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ವತಿಯಿಂದ ಕುಶಾಲನಗರ ಕಾವೇರಿ ಪರಿಸರ ಬಳಗ, ಲಯನ್ಸ್ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ, ಸುಂಟಿಕೊಪ್ಪ ಜೆ.ಸಿ.ಐ.ಸಂಸ್ಥೆಯ ಸಹಯೋಗದಲ್ಲಿ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ “ನಮ್ಮ ನಡೆ ಹಸಿರೆಡೆಗೆ'( ಗ್ರೋ ಗ್ರೀನ್ ) ಹಾಗೂ ‘ನನ್ನ ಗಿಡ ನನ್ನ ಹೆಮ್ಮೆ’ ಅಂಗವಾಗಿ ಏರ್ಪಡಿಸಿದ್ದ ವನ ಮಹೋತ್ಸವ ಸಪ್ತಾಹ :2023 ರ ಅಂಗವಾಗಿ 250 ಅರಣ್ಯ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೂಮಿಯಲ್ಲಿ ಶೇ. 33 ರಷ್ಟು ಅರಣ್ಯ ಇರಬೇಕು. ಪ್ರಸ್ತುತ ಭೂಮಿಯಲ್ಲಿ ಶೇ. 21 ರಷ್ಟು ಅರಣ್ಯ ಇದ್ದು ಶೇ. 33 ರಷ್ಟು ಅರಣ್ಯವನ್ನು ಹೆಚ್ಚಿಸುವ ಗುರಿ ಇದ್ದು ಈ ನಿಟ್ಟನಲ್ಲಿ ವನ ಮಹೋತ್ಸವಗಳಂತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಸ್ತೆ ಬದಿ ಗಿಡ ನೆಡುವ ರೈತರ ಹೊಲದಲ್ಲಿ ಕೃಷಿ ಅರಣ್ಯವನ್ನು ಮಾಡುವುದರೊಂದಿಗೆ ಅರಣ್ಯ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಪರಿಸರ ಸ್ವಚ್ಚವಾಗಿ ಇಟ್ಟು ಕೊಳ್ಳುವುದರಿಂದ ಹಾಗೂ ಗಿಡ ಮರಗಳನ್ನು ಬೆಳೆಸುವುದರಿಂದ ಶುದ್ದವಾದ ಗಾಳಿ ಪಡೆಯಬಹುದು. ಆರೋಗ್ಯವನ್ನು ಉತ್ತಮ ವಾಗಿಟ್ಟು ಕೊಳ್ಳಬಹುದು.ರೈತರು ತಮ್ಮ ಹೊಲದ ಬದುಗಳಲ್ಲಿ ಹೆಚ್ಚೆಚ್ಚು ಮರಗಳನ್ನು ಬೆಳೆಸಬೇಕು. ಅರಣ್ಯ ಇಲಾಖೆಯೊಂದಿಗೆ ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರು ಜತೆಗೂಡಿ ವನಮಹೋತ್ಸವದಲ್ಲಿ ಗಿಡ ನೆಡುವ ಅಭಿಯಾನವನ್ನು ಯಶಸ್ವಿಗೊಳಿಸುವ ಮೂಲಕ ಅರಣ್ಯ ಪ್ರದೇಶವನ್ನು ವೃದ್ಧಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಗಂಗಾಧರಪ್ಪ ಮನವಿ ಮಾಡಿದರು.
ಪರಿಸರವನ್ನು ಸದಾ ಹಸರೀಕರಣ ಮಾಡುವ ಮೂಲಕ ಅರಣ್ಯ ಸಂಪತ್ತು ಹಾಗೂ ಜೀವ – ವೈವಿಧ್ಯ ಸಂರಕ್ಷಣೆ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದರು.
ತಾವು ಕೂಡ ಅರಣ್ಯ ಇಲಾಖೆಯ ಸಹಕಾರದಿಂದ ಗಿಡ ಪಡೆದು ತಮ್ಮ ಜಮೀನಿನಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಬದ್ಧನಾಗಿರುವುದಾಗಿ ಗಂಗಾಧರಪ್ಪ ತಿಳಿಸಿದರು.
ಪರಿಸರ ಪ್ರತಿಜ್ಞೆ ಬೋಧಿಸಿ ವನ ಮಹೋತ್ಸವ ಹಾಗೂ ಗಿಡ ನೆಟ್ಟು ಬೆಳೆಸುವ ಸಪ್ತಾಹ ಕುರಿತು ಮಾತನಾಡಿದ
ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ಸಕಲ ಜೀವರಾಶಿಗಳ ಮುಂದಿನ ಪೀಳಿಗೆಯ ಉಳಿವಿಗಾಗಿ ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು.
ಆರ್ ಎಫ್ ಓ ಕೆ.ವಿ.ಶಿವರಾಂ ಮಾತನಾಡಿ, ಈ ಬಾರಿಯ ವನ ಮಹೋತ್ಸವದ ಪ್ರಯುಕ್ತ ಇಡೀ ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಿದ್ದು, ಜು.1ರಿಂದ ನಡೆಯುತ್ತಿರುವ ಸಸಿ ನೆಡುವ ಅಭಿಯಾನದಲ್ಲಿ1 ಕೋಟಿ ಸಸಿಗಳನ್ನು ನೆಡುವ ಉದ್ದೇಶವಿದೆ. ಕುಶಾಲನಗರ ವಲಯದ ಸಾರ್ವಜನಿಕ ಜಾಗದಲ್ಲಿ 2,500 ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗಿದ್ದು, ಈ ಕಾರ್ಯಕ್ಕೆ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಇಂತಹ ಪರಿಸರ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಮಾತನಾಡಿ, ಎಲ್ಲರೂ ಜತೆಗೂಡಿ ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ಕಾವೇರಿ ಪರಿಸರ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸುವ ಮೂಲಕ ಪರಿಸರದಲ್ಲಿ ಹೆಚ್ಚೆಚ್ಚು ಗಿಡಗಳನ್ನುನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ತೊಡಗೋಣ ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು, ಕಾವಲುಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ,
ಎ.ಪಿ.ಎಂ.ಸಿ.ಕಾರ್ಯದರ್ಶಿ ರವಿಕುಮಾರ್, ಪುರಸಭೆ ಮಾಜಿ ಸದಸ್ಯ ಕೆ.ಜಿ.ಮನು, ನಿವೃತ್ತ ಆರ್.ಎಫ್.ಓ., ಎಂ.ಬಿ.ಮೊಣ್ಣಪ್ಪ, ಲಯನ್ಸ್ ಕ್ಲಬ್ ನ ಅಧ್ಯಕ್ಷ ಸುಮನ್ ಬಾಲರಾಜ್, ಮಾಜಿ ಅಧ್ಯಕ್ಷ ಕೊಡಗನ ಹರ್ಷ, ಕಾರ್ಯದರ್ಶಿ ಸದಸ್ಯ ಡಾ ದೇವರಗುಂಡ ಪ್ರವೀಣ್, ಡಾ ಪಿ.ಸಿ.ರಾಘವೇಂದ್ರ, ಲಯನ್ಸ್ ಕ್ಲಬ್ ನ ಅಧ್ಯಕ್ಷ ಸತೀಶ್ ಕುಮಾರ್,
ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ, ಡಿಆರ್ ಎಫ್ ಓ ಕೆ.ಎನ್.ದೇವಯ್ಯ, ಶ್ರವಣಕುಮಾರ್ ವಿಭೂತಿ, ಚೇತನ್, ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್, ಗಸ್ತು ವನ ಪಾಲಕ ವಿ.ಎಸ್. ಮಂಜೇಗೌಡ, ಸಿದ್ದರಾಮ ನಾಟೀಕರ್, ದಿನೇಶ್, ಲಯನ್ಸ್ ಸಂಸ್ಥೆಯ ಸದಸ್ಯರು, ಅರಣ್ಯ ವೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.