ಮಡಿಕೇರಿ ಜು.8 : ಮಡಿಕೇರಿ ನಗರಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲೆ ನಡೆದ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಜೆಪಿ, ಘಟನೆಯನ್ನು ಕೂಲಕುಂಶವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ನಗರಸಭೆಯಲ್ಲಿ 23 ಸದಸ್ಯರಿದ್ದು, ಈ ರೀತಿಯ ಘಟನೆಯಿಂದ ಭಯದ ವಾತಾವಣ ಸೃಷ್ಟಿಯಾಗಿದೆ. ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಮನೆಗಳಿಗೆ ಹಾನಿಯಾಗುವುದು ಸಹಜ. ಇದಕ್ಕೆ ಜನಪ್ರತಿನಿಧಿಗಳು ಕಾರಣಕರ್ತರಲ್ಲ, ಮಳೆ ನೀರು ನುಗ್ಗಿತು ಎಂದು ನಗರಸಭಾ ಸದಸ್ಯನ ಮೇಲೆ ಹಲ್ಲೆ ನಡೆಸುವುದು ಹೇಯ ಕೃತ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಘಟನೆ ಮಡಿಕೇರಿ ನಗರಕ್ಕೆ ಕಪ್ಪುಚುಕ್ಕೆಯಾಗಿದ್ದು, ನಗರದ ಜನತೆ ಜನಪ್ರತಿನಿಧಿಗಳಿಗೆ ಸಹಕಾರ ನೀಡಬೇಕು ಮತ್ತು ವಿನಯದಿಂದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದು ರಾಬಿನ್ ಮನವಿ ಮಾಡಿದರು.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮೈತ್ರಿ ಹಾಲ್ ಜಂಕ್ಷನ್ ನ ಕ್ಯಾಂಟೀನ್ ಗೆ ನೀರು ನುಗ್ಗಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಖುದ್ದು ಭೇಟಿ ನೀಡಿ ಸ್ವಚ್ಛತಾ ಸಿಬ್ಬಂದಿಗಳ ಸಹಕಾರದಿಂದ ಕಾರ್ಯಚರಣೆ ನಡೆಸಲಾಗಿದೆ. ಆದರೆ ಮರುದಿನ ಏಕಾಏಕಿ ವಾರ್ಡ್‍ನ ಸದಸ್ಯರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು.
ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ವಕ್ತಾರ ಮಹೇಶ್ ಜೈನಿ ಹಾಗೂ ನಗರಾಧ್ಯಕ್ಷ ಮನುಮಂಜುನಾಥ್ ಉಪಸ್ಥಿತರಿದ್ದರು.









