ಮಡಿಕೇರಿ ಜು.8 : ಕೊಡಗು ಜಿಲ್ಲೆಗೆ ಅತ್ಯವಶ್ಯಕವಾದ ಹೈಟೆಕ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕಾ೯ರ ಆದ್ಯತೆ ನೀಡಿದ್ದು, ಆರೋಗ್ಯ ಕ್ಷೇತ್ರದ ಬಹುಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಇದು ಜನಪರವಾದ ಬಜೆಟ್ ಎಂದು ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕೊಡಗು ದೇಶ ಸೇವೆ, ಕ್ರೀಡಾ ಕ್ಷೇತ್ರ, ಪ್ರವಾಸೋದ್ಯಮದಲ್ಲೂ ಹೆಸರು ಪಡೆದಿದೆ. ಜಿಲ್ಲೆಗೆ ಹೊರಗಿನಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ, ಆದರೆ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಲು, ಶಸ್ತ್ರಚಿಕಿತ್ಸೆ ಒದಗಿಸಲು ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯಿತ್ತು, ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದಕ್ಕೆ ಆದ್ಯತೆ ನೀಡಿದೆ.
ಅಲ್ಲದೆ ಕಾಫಿಯನ್ನು ಬ್ರಾಂಡ್ ಮಾಡುವ ಮೂಲಕ ಆಂತರಿಕವಾಗಿ ಕಾಫಿ ಬಳಕೆ ಹೆಚ್ಚಳಕ್ಕೆ ಸಕಾ೯ರ ಒತ್ತು ನೀಡಲಿದೆ, ಇದು ಕಾಫಿ ಜಿಲ್ಲೆಯಾದ ಕೊಡಗಿನ ಕಾಫಿ ಬೆಳೆಗಾರರಿಗೂ ಸಂತಸ ತಂದಿದೆ ಎಂದರು.
ಕೊಡಗಿನ ಜನತೆಗೆ ಚುನಾವಣಾ ಪ್ರಾಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸುವಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಇಬ್ಬರು ಶಾಸಕರು ಸಾಕಷ್ಟು ಯೋಜನೆಗಳನ್ನು ತರುವುದರೊಂದಿಗೆ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕಾರ್ಯ ಮಾಡಲಿದ್ದಾರೆ, ಜಿಲ್ಲೆಯ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸಮೀಪದಲ್ಲಿದೆ ಎಂದು ಪರವಂಡ ಸಿರಾಜ್ ತಿಳಿಸಿದ್ದಾರೆ.