ಮಡಿಕೇರಿ ಜು.10 : ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಆಗಮಿಸಿ ವಿದ್ಯಾರ್ಥಿಗಳು ಪದವಿ ಜೊತೆಗೆ ಸ್ನಾತಕೋತ್ತರ ಶಿಕ್ಷಣದ ಕಡೆ ಗಮನಹರಿಸಬೇಕು, ಪಠ್ಯ ಪುಸ್ತಕ ಗಳಿಗೆ ಮಾತ್ರ ಸೀಮಿತರಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಬಹುಮುಖ ಪ್ರತಿಭಾವಂತರಾಗಬೇಕು ಎಂದರು.
ಕೊಡಗು ವಿಶ್ವ ವಿದ್ಯಾಲಯದ ಜೀವ ರಾಸಾಯನ ಶಾಸ್ತ್ರ ಪ್ರಾಧ್ಯಾಪಕರು ಹಾಗೂ ನಿರ್ದೇಶಕ ಪ್ರೊ. ಕೆ.ಕೆ.ಧರ್ಮಪ್ಪ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ. ವಿದ್ಯಾರ್ಥಿಗಳು ಆರೋಗ್ಯಕರ ಸ್ಪರ್ಧಾ ಮನೋಭಾವದಿಂದ ಅಧ್ಯಯನ ಮಾಡಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಹೆಚ್.ಬಿ.ಲಿಂಗಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನ ಜೀವನಕ್ಕೆ ಹೆಚ್ಚು ಒತ್ತುಕೊಡಬೇಕೆಂದರು.
ಮಾಜಿ ಜಿ.ಪಂ ಸದಸ್ಯ ವಿ.ಕೆ.ಶಶಿಧರ್ ಮಾತನಾಡಿ, ವಿದ್ಯಾರ್ಥಿಗಳು ಜಾತಿ, ಮತ, ಧರ್ಮ, ಲಿಂಗ, ಭಾಷೆ, ಪ್ರಾದೇಶಿಕತೆ ಮುಂತಾದ ಸಂಕುಚಿತ ಮನೋಭಾವಕ್ಕೆ ಎಡೆಗೊಡದೆ ವಿಶ್ವ ಮಾನವರಾಗಿ ಬದುಕಬೇಕು ಎಂದರು.
ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ. ಬಿ.ಡಿ.ಹರ್ಷ ವಾರ್ಷಿಕ ವರದಿಯನ್ನು ವಾಚಿಸಿದರು. ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ವಿಭಾಗಗಳು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಸಂಚಾಲಕ ಪಿ.ಜಯಂತಿ, ಟಿ.ಎಂ.ಸುಧಾಕರ್ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಸಂಚಾಲಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಸಮಿತಿಯ ಪದಾಧಿಕಾರಿಗಳು, ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಎಂ.ಎಸ್.ಸಿಂಚನ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.